ಅಂಬೇಡ್ಕರ್ ಅಭಿವೃದ್ಧಿ ನಿಗಮದ ₹15 ಕೋಟಿ ವಂಚನೆ ಪ್ರಕರಣ: ಐವರ ವಿರುದ್ಧ ಇಡಿ ಹೆಚ್ಚುವರಿ ಚಾರ್ಜ್​ಶೀಟ್

ಎಡಿಸಿಎಲ್ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು 14.95 ಕೋಟಿ ರೂಪಾಯಿ ಹಣ ವರ್ಗಾಯಿಸಿದ ಆರೋಪದ ಪ್ರಕರಣದಲ್ಲಿ ಆಯೂಬ್ ಸಯ್ಯದ್ ಸೇರಿದಂತೆ ಐವರ ವಿರುದ್ಧ ಜಾರಿ ನಿರ್ದೇಶನಾಲಯ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಸಿದೆ. ನಕಲಿ ದಾಖಲೆಗಳು ಹಾಗೂ ಬೇರೊಬ್ಬರ ಗುರುತು ದುರ್ಬಳಕೆ ಮಾಡಿ ಹೆಚ್​ಎಎಲ್​​ನ ಎರಡನೇ ಹಂತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ನಿಗಮದ ಹೆಸರಿನಲ್ಲಿ ಖಾತೆ ತೆರೆದ ಬಗ್ಗೆಯೂ ಇಡಿ ಉಲ್ಲೇಖಿಸಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ₹15 ಕೋಟಿ ವಂಚನೆ ಪ್ರಕರಣ: ಐವರ ವಿರುದ್ಧ ಇಡಿ ಹೆಚ್ಚುವರಿ ಚಾರ್ಜ್​ಶೀಟ್
ಜಾರಿ ನಿರ್ದೇಶನಾಲಯ
Image Credit source: TV9 Network

Updated on: Oct 15, 2026 | 9:21 AM

ಮುಖ್ಯಾಂಶಗಳು

  • ಅಂಬೇಡ್ಕರ್ ಅಭಿವೃದ್ಧಿ ಪ್ರಕರಣದಲ್ಲಿ ಐವರ ವಿರುದ್ಧ ಇಡಿ ಪೂರಕ ದೂರು
  • ಸಿಬಿಐ ಎಫ್​ಐಆರ್ ಆಧರಿಸಿ ಇಡಿ ತನಿಖೆ
  • ನಕಲಿ ದಾಖಲೆ ಬಳಸಿ ₹14.95 ಕೋಟಿ ವರ್ಗಾವಣೆ ಆರೋಪ

ಬೆಂಗಳೂರು, ಅಕ್ಟೋಬರ್ 15: ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ (ADCL) ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು, ₹14.95 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣ ಸಂಬಂದ ಇಡಿ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಸಿದೆ. ಅಕ್ಟೋಬರ್ 5ರಂದು ಬೆಂಗಳೂರಿನ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ನ್ಯಾಯಾಲಯಕ್ಕೆ ಈ ಚಾರ್ಜ್​ಶೀಟ್ ಸಲ್ಲಿಸಲಾಗಿದ್ದು, ಆಯೂಬ್ ಸಯ್ಯದ್ ಸೇರಿದಂತೆ ಐವರನ್ನು ಹೆಸರಿಸಲಾಗಿದೆ.

ನಕಲಿ ದಾಖಲೆ ಬಳಸಿ ₹14.95 ಕೋಟಿ ಹಣ ವರ್ಗಾವಣೆ ಆರೋಪ

ಕೇಂದ್ರೀಯ ತನಿಖಾ ದಳದ (CBI) ಭ್ರಷ್ಟಾಚಾರ ನಿಗ್ರಹ ಘಟಕ ಬೆಂಗಳೂರಿನಲ್ಲಿ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಭಾರತೀಯ ದಂಡ ಸಂಹಿತೆ (IPC) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇಡಿ ತನಿಖೆಯ ಪ್ರಕಾರ, ಬೆಂಗಳೂರಿನ ಹೆಚ್​ಎಎಲ್​​ನ ಎರಡನೇ ಹಂತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ತೆರೆಯಲಾಗಿತ್ತು. ನಕಲಿ ದಾಖಲೆಗಳು ಹಾಗೂ ಬೇರೊಬ್ಬರ ಗುರುತನ್ನು ದುರ್ಬಳಕೆ ಮಾಡಿಕೊಂಡು ಈ ಖಾತೆ ತೆರೆಯಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ನಂತರ ನಿಗಮಕ್ಕೆ ಸೇರಿದ ತಲಾ ₹5 ಕೋಟಿ ಮೊತ್ತದ ನಾಲ್ಕು ಸ್ಥಿರ ಠೇವಣಿಗಳನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಲಾಗಿತ್ತು. ನಕಲಿ ಟಿಡಿಆರ್/ಎಫ್​ಡಿಆರ್ ದಾಖಲೆಗಳು ಹಾಗೂ ಸೃಷ್ಟಿಸಿದ ಠೇವಣಿ ಮುಕ್ತಾಯ ಪತ್ರಗಳನ್ನು ಬಳಸಿ ಈ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ಇಡಿ ಆರೋಪ. ಇದರಿಂದ ಸುಮಾರು ₹14.95 ಕೋಟಿ ಹಣವನ್ನು ವರ್ಗಾಯಿಸಿಕೊಂಡಿದ್ದು, ಈ ಮೊತ್ತವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧದಿಂದ ಗಳಿಸಿದ ಹಣವೆಂದು ಪರಿಗಣಿಸಲಾಗಿದೆ.

ಹಲವು ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ

ಹಣವನ್ನು ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ನಂತರ ನಗದು ರೂಪದಲ್ಲಿ ಹಿಂಪಡೆಯಲಾಗಿರುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಇಡಿ ಹೇಳಿದೆ. ಹಣದ ಮೂಲವನ್ನು ಮರೆಮಾಚುವ ಉದ್ದೇಶದಿಂದ ಈ ರೀತಿಯ ವಹಿವಾಟು ನಡೆಸಲಾಗಿದೆ ಎಂಬುದು ತನಿಖಾ ಸಂಸ್ಥೆಯ ಆರೋಪ.

ಪಿಎಂಎಲ್​ಎ ಕಾಯ್ದೆಯ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಿದ ಹೇಳಿಕೆಗಳಲ್ಲಿಯೂ ಹಣವನ್ನು ಸ್ವೀಕರಿಸುವುದು, ವರ್ಗಾಯಿಸುವುದು ಹಾಗೂ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಇಡಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us