ಬೆಂಗಳೂರು ಕಲಬುರಗಿ ಮಧ್ಯೆ ಸಂಚರಿಸಲಿವೆ ವಾರದ ವಿಶೇಷ ರೈಲುಗಳು: ಇಲ್ಲಿದೆ ವೇಳಾಪಟ್ಟಿ
Bengaluru Kalaburagi Weekly special trains: ಬೆಂಗಳೂರು ಮತ್ತು ಕಲಬುರಗಿಯ ಜನತೆಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಬೇಸಗೆ, ಹಬ್ಬಗಳು ಮತ್ತು ಸಾಲು ರಜೆಗಳ ಕಾರಣ ಇದೀಗ ವಾರಕ್ಕೆ 2 ವಿಶೇಷ ರೈಲು ಘೋಷಣೆಯಾಗಿದೆ. ವಿಶೇಷ ರೈಲು ಹೊರಡುವ ದಿನಾಂಕ, ಸಮಯ, ನಿಲುಗಡೆ ಮತ್ತಿತರ ಮಾಹಿತಿ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 6: ಬೇಸಗೆ, ಹಬ್ಬಗಳು ಮತ್ತು ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಕಾರಣ ಬೆಂಗಳೂರು ಮತ್ತು ಕಲಬುರಗಿ (Kalaburagi) ನಡುವೆ ಎರಡು ವಿಶೇಷ ವೀಕ್ಲಿ ರೈಲುಗಳನ್ನು (Weekly Special Train) ಓಡಿಸಲು ನೈಋತ್ಯ ರೈಲ್ವೆ (SWR) ಮುಂದಾಗಿದೆ. ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ವಿಶೇಷ ರೈಲು ತೆರಳುವ ಮತ್ತು ವಾಪಸಾಗುವ ದಿನಾಂಕ, ಸಮಯ, ನಿಲುಗಡೆ ಮತ್ತಿತರ ಮಾಹಿತಿ ಇಲ್ಲಿದೆ.
ರೈಲು ಸಂಖ್ಯೆ 06597 (ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ) ಶುಕ್ರವಾರದಂದು ಸಂಚರಿಸಲಿದೆ. ಇದು ಒಟ್ಟು 10 ಟ್ರಿಪ್ ಸಂಚರಿಸಲಿದೆ (ಏಪ್ರಿಲ್ 12, 19 & 26; ಮೇ 3, 10, 17, 24 & 31; ಜೂನ್ 7 ಮತ್ತು 14).
ರೈಲು ಸಂಖ್ಯೆ 06598 (ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು) ಶನಿವಾರದಂದು ಚಲಿಸುತ್ತದೆ ಮತ್ತು 10 ಟ್ರಿಪ್ ಸಂಚರಿಸಲಿದೆ (ಏಪ್ರಿಲ್ 13, 20 & 27 ಮೇ 4, 11, 18 & 25; ಜೂನ್ 1, 8 & 15).
ಪ್ರಯಾಣದ ದಿನಾಂಕ, ಸಮಯ
ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಶೇಷ ರೈಲು ರಾತ್ರಿ 9.05ಕ್ಕೆ ಕಲಬುರಗಿ ತಲುಪಲಿದೆ. ಹಿಂದಿರುಗುವ ರೈಲು ಕಲಬುರಗಿಯಿಂದ ಬೆಳಗ್ಗೆ 5.10ಕ್ಕೆ ಹೊರಟು ಸಂಜೆ 4.15ಕ್ಕೆ ಯಶವಂತಪುರ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್‌ಗಳಲ್ಲಿ ನಿಲುಗಡೆಯಾಗಲಿದೆ. ವೀಕ್ಲಿ ವಿಶೇಷ ರೈಲು 20 ಕೋಚ್‌ಗಳನ್ನು ಹೊಂದಿದ್ದು, ಅದರಲ್ಲಿ 10 ಕೋಚ್‌ಗಳು ನಾನ್-ಎಸಿ ಸ್ಲೀಪರ್ ಕ್ಲಾಸ್ ಆಗಿರುತ್ತವೆ.
ಏಪ್ರಿಲ್ 5ರಿಂದ ಆರಂಭವಾಗಬೇಕಿದ್ದ ರೈಲು 12ರಿಂದ ಶುರು
ಏಪ್ರಿಲ್ 5ರಿಂದ ಆರಂಭವಾಗಬೇಕಿದ್ದ ವಾರದ ವಿಶೇಷ ರೈಲು ಕೆಲ ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿದ್ದು, 12ರಿಂದ ಆರಂಭವಾಗಲಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
‘ಕೆಲ ತಾಂತ್ರಿಕ ಕಾರಣಗಳಿಂದ ಏಪ್ರಿಲ್ 5ರಂದು ಪ್ರಾರಂಭವಾಗಬೇಕಾಗಿದ್ದ ಬೆಂಗಳೂರು ಕಲಬುರಗಿ ಸಪ್ತಾಹಿಕ ವಿಶೇಷ ರೈಲು ಹೊರಡಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಸತತ ದೆಹಲಿ ಮತ್ತು ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ಚರ್ಚಿಸಲಾಯಿತು. ಈ ವಿಶೇಷ ರೈಲು ಮುಂದಿನ ವಾರ 12.04.24ರಂದು ಮುಂಚೆ ನಿರ್ಧರಿಸಿದ ಸಮಯಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ’ ಎಂದು ಜಾಧವ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಯಾದಗಿರಿಯಲ್ಲೂ ನಿಲ್ಲುತ್ತೆ ವಂದೇ ಭಾರತ್ ರೈಲು: ಇಲ್ಲಿದೆ ಹೊಸ ವೇಳಾಪಟ್ಟಿ
ವಂದೇ ಭಾರತ್ ನಿಲುಗಡೆ
‘ವಂದೇ ಭಾರತ್ ರೈಲು ಪ್ರಾರಂಭವಾದ ದಿನದಿಂದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಸಾಮಾನ್ಯ ಜನರಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳು ಒತ್ತಾಯಿಸಿದರು. ಇದೇ ನಿಟ್ಟಿನಲ್ಲಿ ನಾನು ಪ್ರಾರಂಭವಾದ ದಿನದಂದು ರೈಲ್ವೆ ಇಲಾಖೆಗೆ ಮಾತನಾಡಿ ಈ ವಿಷಯ ಕುರಿತು ಕ್ರಮ ಕೈಗೊಳ್ಳಲು ಮನವಿಯನ್ನು ಮಾಡಿದೆ. ಇದರ ಪ್ರತಿಫಲವಾಗಿ ಇಂದು ಕೇಂದ್ರದ ರೈಲ್ವೆ ಇಲಾಖೆ ಆದೇಶವನ್ನು ಹೊರಡಿಸಿದೆ. ಕಲಬುರಗಿಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಯಾದಗಿರಿ ನಿಲ್ದಾಣದಲ್ಲಿ ಬೆಳಿಗ್ಗೆ 05:54 ನಿಮಿಷಕ್ಕೆ ಬಂದು 05:55 ನಿಮಿಷಕ್ಕೆ ಹೊರಡಲಿದೆ ಮತ್ತು ಬೆಂಗಳೂರಿನಿಂದ ಬರುವಾಗ ರಾತ್ರಿ 09:44 ನಿಮಿಷಕ್ಕೆ ತಲುಪಲಿದ್ದು 09:45 ನಿಮಿಷಕ್ಕೆ ಕಲಬುರಗಿ ಕಡೆ ಹೊರಡಲಿದೆ. ಈ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಹೊಂದುವಂತೆ ಮಾಡಿ ನಮ್ಮ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ನಮ್ಮ ನೆಚ್ಚಿನ ಪ್ರಧಾನಿಯವರಿಗೆ ನಾನು ಧನ್ಯವಾದವನ್ನು ಹೇಳಲು ಬಯಸುತ್ತೇನೆ’ ಎಂದು ಜಾಧವ್ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ