ಅಕ್ರಮವಾಗಿ ವಾಸಿಸುತ್ತಿದ್ದವರು ಮುಸ್ಲಿಮರೆಂಬ ಪ್ರಶ್ನೆ ಬರಲ್ಲ: ಪಿಣರಾಯಿಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಡೆದ ಮನೆಗಳ ತೆರವು ಕಾನೂನುಬದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪಿಣರಾಯಿ ವಿಜಯನ್ ಅವರ 'ಬುಲ್ಡೋಜರ್ ರಾಜ್' ಆರೋಪ ತಳ್ಳಿಹಾಕಿದ ಡಿಕೆಶಿ, ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದಿದ್ದಾರೆ. ಅಕ್ರಮವಾಗಿ ವಾಸಿಸುತ್ತಿದ್ದವರು ಮುಸ್ಲಿಮರೆಂಬ ಪ್ರಶ್ನೆ ಬರಲ್ಲ ಎಂದೂ ಹೇಳಿದ್ದಾರೆ.

ಅಕ್ರಮವಾಗಿ ವಾಸಿಸುತ್ತಿದ್ದವರು ಮುಸ್ಲಿಮರೆಂಬ ಪ್ರಶ್ನೆ ಬರಲ್ಲ: ಪಿಣರಾಯಿಗೆ ಡಿಕೆ ಶಿವಕುಮಾರ್ ಖಡಕ್ ತಿರುಗೇಟು
ಡಿಕೆ ಶಿವಕುಮಾರ್

Updated on: Dec 27, 2025 | 12:55 PM

ಬೆಂಗಳೂರು, ಡಿಸೆಂಬರ್ 27: ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ವಾಸ್ತವ ಅರಿಯದೆ ಪ್ರತಿಕ್ರಿಯಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಪಿಣರಾಯಿ ವಿಜಯನ್ ಅವರ ‘ಬುಲ್ಡೋಜರ್ ರಾಜ್’ ಎಕ್ಸ್ ಸಂದೇಶಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಪಿಣರಾಯಿ ವಿಜಯನ್ ಹಿರಿಯ ನಾಯಕರು. ಆದರೆ ಸ್ಥಳೀಯ ವಿಚಾರಗಳನ್ನು, ಸತ್ಯ ಸಂಗತಿಯನ್ನು ತಿಳಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೋಗಿಲು ಲೇಔಟ್ ಬಳಿ ಕೆಲವು ಜನರು ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗವನ್ನು ಕಸದ ವಿಲೇವಾರಿಗೆ ಮೀಸಲಿಟ್ಟ 5 ಎಕರೆ ಪ್ರದೇಶವಾಗಿದ್ದು, ಅಕ್ರಮ ಒತ್ತುವರಿಯನ್ನು ಕಾನೂನುಬದ್ಧವಾಗಿ ತೆರವುಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮನೆ ಕಳೆದುಕೊಂಡವರಿಗೆ ವಸತಿ ನಿಗಮದಿಂದ ಹಂಚಿಕೆ ಮಾಡಲಾಗುತ್ತಿದೆ: ಡಿಕೆಶಿ

ಯಾರನ್ನೂ ಮನೆ ಕಳೆದುಕೊಳ್ಳುವಂತೆ ಮಾಡಿಲ್ಲ. ಮನೆ ಕಳೆದುಕೊಂಡವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಹಂಚಿಕೆ ಮಾಡಲಾಗುತ್ತಿದೆ. ನಾವು ಬುಲ್ಡೋಜರ್ ರಾಜಕಾರಣವನ್ನು ಪಾಲಿಸುವುದಿಲ್ಲ. ಕಾನೂನುಬದ್ಧ ಪ್ರಕ್ರಿಯೆಯಲ್ಲೇ ತೆರವು ಕಾರ್ಯ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಷಯವನ್ನು ನಮ್ಮ ಪಕ್ಷದ ನಾಯಕರಿಗೂ ತಿಳಿಸಲಾಗಿದೆ. ಇಲ್ಲಿನ ಸ್ಥಿತಿಗತಿಗಳನ್ನು ಅರಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸರ್ಕಾರಿ ಜಾಗ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ


ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂತಹ ಪ್ರತಿಕ್ರಿಯೆ ಮೂಡಿ ಬಂದಿರುವುದು ರಾಜಕೀಯ ಗಿಮಿಕ್ ಆಗಿರಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಜಾಗದಲ್ಲಿ ಅಕ್ರಮ ಸ್ಲಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್​ಗೆ ಡಿಕೆಶಿ ವರದಿ

ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಡಿಕೆ ಶಿವಕುಮಾರ್ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಕೋಗಿಲು ಲೇಔಟ್‌ನಲ್ಲಿ ಬಿಬಿಎಂಪಿಗೆ ಸೇರಿದ 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಅಕ್ರಮ ತೆರವು ಕಾನೂನುಬದ್ಧವಾಗಿ ನಡೆದಿದೆ. ಅಕ್ರಮವಾಗಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯದವರು ಎಂಬ ಮಾಹಿತಿಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏನು ಹೇಳಿದ್ದರು ಪಿಣರಾಯಿ ವಿಜಯನ್?

ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ ‘ಬುಲ್ಡೋಜರ್ ರಾಜ್’ ಕ್ರಮವನ್ನು ಕರ್ನಾಟಕ ಕಾಂಗ್ರೆಸ್​​ ಸರ್ಕಾರ ಅನುಸರಿಸುತ್ತಿದೆ ಎಂದು ಪಿಣರಾಯಿ ವಿಜಯನ್ ಎಕ್ಸ್​​​ನಲ್ಲಿ ಬರೆದುಕೊಂಡಿದ್ದರು. ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಈ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Sat, 27 December 25