ಜೂನ್ 1 ರಿಂದ ಘಾಟ್ ಸೆಕ್ಷ​ನಲ್ಲಿ ವಂದೇ ಭಾರತ್ ಟ್ರಯಲ್ ರನ್: ಬೆಂಗಳೂರು – ಸುಬ್ರಹ್ಮಣ್ಯ ಪ್ರಯಾಣಕ್ಕಿನ್ನು ನಾಲ್ಕೈದು ಗಂಟೆ ಸಾಕು!

Bengaluru Mangaluru Vande Bharat Express: ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಜೂನ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಜೂನ್ 1 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣ ಘಾಟ್ ಮಾರ್ಗದಲ್ಲಿ ಅಂತಿಮ ಹಂತದ ಆರ್‌ಡಿಎಸ್‌ಒ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ಜೂನ್ 1 ರಿಂದ ಘಾಟ್ ಸೆಕ್ಷ​ನಲ್ಲಿ ವಂದೇ ಭಾರತ್ ಟ್ರಯಲ್ ರನ್: ಬೆಂಗಳೂರು - ಸುಬ್ರಹ್ಮಣ್ಯ ಪ್ರಯಾಣಕ್ಕಿನ್ನು ನಾಲ್ಕೈದು ಗಂಟೆ ಸಾಕು!
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಾಂದರ್ಭಿಕ ಚಿತ್ರ)
Image Credit source: TV9 Network

Updated on: May 30, 2026 | 2:47 PM

ಮಂಗಳೂರು, ಮೇ 30: ಕರಾವಳಿ ಕರ್ನಾಟಕ (Coastal Karnataka) ಮತ್ತು ರಾಜಧಾನಿ ಬೆಂಗಳೂರು (Bengaluru) ನಡುವೆ ಕೊನೆಗೂ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Bengaluru–Mangaluru Vande Bharat Express)’ ಸಂಚಾರಕ್ಕೆ ಮುಹೂರ್ತ ಕೂಡಿಬಂದಿದೆ. ಜೂನ್​ನಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂನ್ 1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಂತಿಮ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗುವ ಹಂತಕ್ಕೆ ತಲುಪಿವೆ. ರೈಲ್ವೆ ಸಚಿವಾಲಯದ ಗುಣಮಟ್ಟ ಮತ್ತು ಮಾನದಂಡಗಳ ವಿಭಾಗವಾದ ಆರ್‌ಡಿಎಸ್‌ಒ (RDSO) ಉನ್ನತ ಮಟ್ಟದ ತಂಡವು ಜೂನ್ 1 ರಿಂದ ಈ ಘಾಟ್ ಪ್ರದೇಶದಲ್ಲಿ ಸುಧಾರಿತ ಪ್ರಾಯೋಗಿಕ ಸಂಚಾರವನ್ನು (Trial Runs) ಆರಂಭಿಸಲಿದೆ.

ಮುಖ್ಯಾಂಶಗಳು

  • ಜೂನ್ 1 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್‌ನಲ್ಲಿ ವಂದೇ ಭಾರತ್ ರೈಲು ಸಂಚಾರದ ಸುರಕ್ಷತಾ ಹೈ-ಲೆವೆಲ್ ಟ್ರಯಲ್ ರನ್.
  • ದುರ್ಗಮ ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿರುವ 55 ಕಿಮೀ ಕಠಿಣ ಘಾಟ್ ಮಾರ್ಗ.
  • ಜೂನ್​ನಲ್ಲೇ ರೈಲು ಸಂಚಾರ ಶುರು ಮಾಡುವ ಭರವಸೆ ನೀಡಿದ್ದ ಸಚಿವರು.

ಸೋಮಣ್ಣ ಭರವಸೆಯಂತೆ ಜೂನ್‌ನಲ್ಲೇ ರೈಲು ಓಡಾಟ

ಇತ್ತೀಚೆಗೆ ಮೇ 23 ರಂದು ಮಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜೂನ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್‌ಎಂ (DRM) ಮುದಿತ್ ಮಿತ್ತಲ್ ನೀಡಿರುವ ಮಾಹಿತಿ ಪ್ರಕಾರ, ಜೂನ್ 1 ರಿಂದ ಆರಂಭವಾಗಲಿರುವ ಈ ಟೆಸ್ಟಿಂಗ್ ಪ್ರಕ್ರಿಯೆಯು ಸುಮಾರು ಒಂದು ವಾರಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಇಂಜಿನ್ ಮೂಲಕ ಖಾಲಿ ಪ್ಯಾಸೆಂಜರ್ ರೇಕ್ ಬಳಸಿ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ಭಾರತದ ಅತ್ಯಂತ ಸವಾಲಿನ ರೈಲ್ವೆ ಮಾರ್ಗ

ಹಾಸನ-ಮಂಗಳೂರು ಲೈನ್‌ನಲ್ಲಿ ಬರುವ 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಅತ್ಯಂತ ಕಡಿದಾದ ಮಾರ್ಗವಾಗಿದ್ದು, ಭಾರತದಲ್ಲೇ ಅತ್ಯಂತ ಕಠಿಣ ತಾಂತ್ರಿಕ ಸವಾಲುಗಳನ್ನು ಹೊಂದಿರುವ ರೈಲ್ವೆ ಸೆಕ್ಷನ್ ಎಂದು ಗುರುತಿಸಲ್ಪಟ್ಟಿದೆ. ಭೂಕುಸಿತದ ಭೀತಿಯ ನಡುವೆಯೂ 57 ಸುರಂಗಗಳು (Tunnels), 258 ಸೇತುವೆಗಳು ಮತ್ತು 108 ಕಡಿದಾದ ತಿರುವುಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಓವರ್‌ಹೆಡ್ ವಿದ್ಯುದೀಕರಣದ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ರೈಲುಗಳು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

729 ಕೋಟಿ ರೂ.ಗೆ ಏರಿಕೆಯಾದ ಯೋಜನಾ ವೆಚ್ಚ

ಮೈಸೂರು-ಹಾಸನ-ಮಂಗಳೂರು ಸೇರಿದಂತೆ ಒಟ್ಟು 400 ಕಿಲೋಮೀಟರ್ ರೈಲ್ವೆ ಲೈನ್ ವಿದ್ಯುದೀಕರಣದ ಗುತ್ತಿಗೆಯನ್ನು ಆಗಸ್ಟ್ 2021 ರಲ್ಲಿ ‘ರೈಟ್ಸ್ (RITES’ ಸಂಸ್ಥೆಗೆ ನೀಡಲಾಗಿತ್ತು. ಆರಂಭದಲ್ಲಿ ಈ ಯೋಜನೆಗೆ 461.23 ಕೋಟಿ ರೂ. ಅಂದಾಜಿಸಲಾಗಿದ್ದರೂ, ರೈಲ್ವೆ ಸಚಿವಾಲಯವು ಮಾರ್ಚ್ 2026 ರಲ್ಲಿ ಇದರ ಪರಿಷ್ಕೃತ ವೆಚ್ಚವನ್ನು 729.28 ಕೋಟಿ ರೂ.ಗೆ ಹೆಚ್ಚಿಸಿದೆ. ಇದರಲ್ಲಿ ಕೇವಲ ಘಾಟ್ ಸೆಕ್ಷನ್ ವಿದ್ಯುದೀಕರಣಕ್ಕಾಗಿ ಡಿಸೆಂಬರ್ 2023 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ 93.55 ಕೋಟಿ ರೂ. ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ?

ಈ ಆರ್‌ಡಿಎಸ್‌ಒ ಪ್ರಾಯೋಗಿಕ ಸಂಚಾರದ ವರದಿ ಸಲ್ಲಿಕೆಯಾದ ತಕ್ಷಣ ರೈಲ್ವೆ ಮಂಡಳಿಯು ವಂದೇ ಭಾರತ್ ಸಂಚಾರದ ಅಧಿಕೃತ ಉದ್ಘಾಟನಾ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us