ಬೆಂಗಳೂರಿನಲ್ಲಿ ಜಾರಿಯಾಗದ ಆಟೋ ಮೀಟರ್ ಹೊಸ ದರ: ದುಪ್ಪಟ್ಟು ವಸೂಲಿ, ಪ್ರಯಾಣಿಕರು ಆಕ್ರೋಶ
ಆಗಸ್ಟ್ 1ರಿಂದಲೇ ಆಟೋ ಮೀಟರ್ ದರ ಏರಿಕೆಯಾದರೂ ಆಟೋ ಚಾಲಕರು ಹೊಸ ದರವನ್ನು ಅಳವಡಿಸಿಕೊಂಡಿಲ್ಲ. ಮೀಟರ್ ಕಂಪನಿಗಳು ರೀ-ಕ್ಯಾಲಿಬ್ರೇಷನ್‌ಗೆ ಅಧಿಕ ದರ ವಸೂಲಿ ಮಾಡುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಇತ್ತ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸುವಂತಾಗಿದ್ದಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರು, ಆಗಸ್ಟ್ 13: ಆಗಸ್ಟ್-1 ರಿಂದ ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆ (auto fare hike) ಆಗಿದೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಆಟೋದಲ್ಲೂ ಹೊಸ ದರ ಜಾರಿಯಾಗಿಲ್ಲ. ಹಳೆಯ ಮೀಟರ್ನಲ್ಲೇ ದುಪ್ಪಟ್ಟು ದರ ಪಡೆಯುತ್ತಿದ್ದು, ಇದಕ್ಕೆ ಕಾರಣ ಅಂದರೆ ಆಟೋ ಮೀಟರ್ ಕಂಪನಿಗಳ ದುಪ್ಪಟ್ಟು ದರ ವಸೂಲಿ ಕಾರಣವಂತೆ. ಇದರಿಂದ ಪ್ರಯಾಣಿಕರು (passenger) ಸಮಸ್ಯೆ ಎದುರಿಸುವಂತಾಗಿದೆ.
ಬೆಂಗಳೂರಿನಲ್ಲಿ ಈ ಹಿಂದೆ ಎರಡು ಕಿಮೀ ಗೆ ಕನಿಷ್ಟ 30 ರೂ ಇದ್ದ ದರವನ್ನು, 36 ರೂ,ಗೆ ಪ್ರತಿ ಕಿಮೀ 15 ರೂ ಇದ್ದ ದರವನ್ನು 18 ರೂ ಏರಿಕೆ ಮಾಡಿ ಆದೇಶ ಮಾಡಲಾಗಿತ್ತು. ಆದರೆ ದರ ಏರಿಕೆ ಆಗಿ 12 ದಿನಗಳು ಕಳೆದರೂ ಇಲ್ಲಿಯವರೆಗೆ ಒಂದೇ ಒಂದು ಆಟೋದಲ್ಲೂ ಹೊಸ ಮೀಟರ್ ದರವನ್ನು ಅಳವಡಿಸಲು ಮುಂದಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದರೆ ಆಟೋ ಮೀಟರ್ ತಯಾರಿಕ ಕಂಪನಿಗಳು ರೀ ಕ್ಯಾಲಿಬ್ರೇಷನ್ ಮಾಡಲು ಆಟೋ ಚಾಲಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡಲು ಮುಂದಾಗಿದ್ದಾರಂತೆ.
ಇದನ್ನೂ ಓದಿ: Auto fare hike: ಆಟೋ ಪ್ರಯಾಣಿಕರಿಗೆ ಶಾಕ್! ಬೆಂಗಳೂರಲ್ಲಿ ಇಂದಿನಿಂದ ಮೀಟರ್ ದರ ಏರಿಕೆ
ಹೊರಗಡೆ ಹೊಸ ಆಟೋ ಮೀಟರ್ ದರ ರೀ ಕ್ಯಾಲಿಬ್ರೇಷನ್ ಮಾಡಲು ಕೇವಲ 150 ರಿಂದ 400 ರೂ ಪಡೆಯಲು ಮುಂದಾಗಿದ್ದರೆ, ಇತ್ತ ಆಟೋ ಮೀಟರ್ ತಯಾರಿಕ ಕಂಪನಿಗಳು ಮಾತ್ರ 900 ರಿಂದ 1000 ರೂ. ವರೆಗೂ ಹಣವನ್ನು ಕೇಳ್ತಿದ್ದಾರಂತೆ. ಇದರಿಂದ ಆಟೋ ಚಾಲಕರು ಹೊಸ ಮೀಟರ್ ದರವನ್ನು ಬದಲಾಯಿಸಿಕೊಳ್ಳಲು ಮುಂದಾಗುತ್ತಿಲ್ಲ.
ಪ್ರಯಾಣಿಕರ ಆಕ್ರೋಶ
ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕ ಮಹೇಶ್, ಯಾವ ಆಟೋ ಚಾಲಕನು ಮೀಟರ್ ಹಾಕುವುದೇ ಇಲ್ಲ. ಮೆಜೆಸ್ಟಿಕ್ ಹೋಗಲು 10 ಆಟೋಗಳನ್ನು ಕೇಳಿದ್ದೀನಿ ಯಾರು ಬರುತ್ತಿಲ್ಲ. 200 ರೂ ಕೇಳ್ತಿದ್ದಾರೆ, ಟ್ರಾಫಿಕ್ ಪೋಲಿಸರು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಆಟೋ ಮೀಟರ್ ಹಾಕಿಲ್ಲ ಎಂದು ಆರ್ಟಿಓ ಮತ್ತು ಟ್ರಾಫಿಕ್ ಪೋಲಿಸರು ಆಟೋಗಳನ್ನು ಸೀಜ್ ಮಾಡಿ ಸಾವಿರಾರು ರೂ ಕೇಸ್ ಹಾಕ್ತಿದ್ದಾರೆ. ಮೀಟರ್ ರಿಪೇರಿ ಮಾಡುವವರ ಬಳಿ ಹೊಸ ದರವನ್ನು ಬದಲಾವಣೆ ಮಾಡಿಸಿಕೊಳ್ಳೋಣ ಅಂದರೆ ಆಟೋ ಮೀಟರ್ ತಯಾರಿಕ ಕಂಪನಿಗಳು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಹೊರಗೆ ಮೀಟರ್ ರೀ ಕ್ಯಾಲಿಬ್ರೇಷನ್ ಮಾಡಿಸಿಕೊಂಡರೇ ಮೀಟರ್ ಟ್ಯಾಂಪರಿಂಗ್ ಆಗುವ ಸಾಧ್ಯತೆ ಇದೆ. ಹಾಗಾಗಿ ಮೀಟರ್ ಕಂಪನಿಗಳಿಂದಲೇ ಹೊಸ ದರವನ್ನು ರೀ ಕ್ಯಾಲಿಬ್ರೇಷನ್ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಯಾವುದೇ ಆಟೋ ಚಾಲಕರು ನೂತನ ದರವನ್ನು ಪ್ರಯಾಣಿಕರಿಂದ ಪಡೆಯಲು ಮುಂದಾಗುತ್ತಿಲ್ಲ. ಮೀಟರ್ ದರ ಹೆಚ್ಚಳವಾಗಿದೆ ಎಂದು ಹಣವನ್ನು ಪಡೆದುಕೊಳ್ಳಲು ಮುಂದಾಗಿದ್ದಾರಂತೆ.
ಇದನ್ನೂ ಓದಿ: Bengaluru auto price: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಆಟೋ ಪ್ರಯಾಣದ ದರ ಹೆಚ್ಚಳ!
ಒಟ್ಟಿನಲ್ಲಿ ಆಟೋ ಮೀಟರ್ ದರ ಏರಿಕೆ ಆದರೂ ಆಟೋ ಚಾಲಕರು ಹೊಸ ದರವನ್ನು ತೆಗೆದುಕೊಳ್ಳದೆ ದರ ಏರಿಕೆ ಆಗಿದೆ ಎಂದು ಪ್ರಯಾಣಿಕರಿಂದ 40 ರಿಂದ 50 ರೂ ಪಡೆದುಕೊಳ್ಳುತ್ತಿದ್ದು, ಈ ಕೂಡಲೇ ಮಾಪನ ಇಲಾಖೆ ರೀ ಕ್ಯಾಲಿಬ್ರೇಷನ್ ಮಾಡಲು ದರ ಫಿಕ್ಸ್ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:43 am, Wed, 13 August 25







