ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯಲು ಪ್ರಮುಖ ನಿರ್ಧಾರ ಕೈಗೊಂಡ ಡಿಕೆ ಶಿವಕುಮಾರ್
ಬೆಂಗಳೂರು ಮಳೆ ಅವಾಂತರ ಸೃಷ್ಟಿಸಿದ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಅನಾಧಿಕೃತ ಕಟ್ಟಡಗಳ ವಿರುದ್ಧ ಕೆಲ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ. ಅಲ್ಲದೇ ರಾಜುಕಾಲುವೆ ನೀರು ಮನೆಗಳಿಗೆ ನುಗ್ಗದಂತೆ ಗೇಟ್, ರಸ್ತೆ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 24: ನಗರದಲ್ಲಿ ನಿರಂತರ ಮಳೆ ಮುಂದುವರೆದಿದೆ. ಈಗಾಗಲೇ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ ನಾನಾ ಸಮಸ್ಯೆ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು ವಿಪತ್ತು ನಿರ್ವಹಣೆ ಕುರಿತು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಮಾಡಿದ್ದು, ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಸಭೆಯಲ್ಲಿ ಯಶವಂತಪುರ ಶಾಸಕ ಸೋಮಶೇಖರ್, ಬಿಬಿಎಂಪಿ ಮುಖ್ಯ ಆಯುಕ್ತ, ಮುಖ್ಯ ಇಂಜಿನಿಯರ್ ಉಪಸ್ಥಿತರಿದ್ದರು.
ಅಪಾರ್ಟ್ಮೆಂಟ್ನ 7-8 ಕುಟುಂಬ ಹೊರಬರಲು ಒಪ್ಪುತ್ತಿಲ್ಲ
ಸಭೆ ಬಳಿಕ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಮಳೆಯಿಂದ ಮುಳುಗಡೆಯಾದ ಪ್ರದೇಶದ ಜನರಿಗೆ ವಸತಿ ಸೌಲಭ್ಯ ನೀಡಲಾಗಿದೆ. ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನಿವಾಸಿಗಳ ಸ್ಥಳಾಂತರ ಮಾಡಲಾಗಿದ್ದು, ಅಪಾರ್ಟ್ಮೆಂಟ್ನ 7-8 ಕುಟುಂಬ ಹೊರಬರಲು ಒಪ್ಪುತ್ತಿಲ್ಲ. ಕಾನೂನು ರೀತಿಯಲ್ಲಿ ಹೊರಗೆ ಕಳುಹಿಸಿ ಕ್ರಮಕೈಗೊಳ್ಳುತ್ತೇವೆ. ಟಿಡಿಆರ್ ನೀಡಿ ಖಾಸಗಿ ಜಮೀನು ವಶಪಡಿಸಿಕೊಳ್ಳಲು ಸರ್ವೆ ನಡೆಸಿ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಯಲು ರಾಜಕಾಲುವೆ, ಕೆರೆಗೆ ಗೇಟ್ ಅಳವಡಿಸುವಂತೆ ಜನ ಹೇಳಿದ್ದಾರೆ. ಬಿಬಿಎಂಪಿ, ಬಿಡಿಎ, ಕೆರೆ ಪ್ರಾಧಿಕಾರ, ಜಲಮಂಡಳಿ ಸೇರಿ ಹೊಸದಾಗಿ 300 ಕಿ.ಮೀ. ರಸ್ತೆ ನಿರ್ಮಿಸುವ ಬಗ್ಗೆ ಮಾಡಲು ಹೇಳಿದ್ದೇನೆ. ರಾಜಕಾಲುವೆ ಬಫರ್ಜೋನ್ನಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ರೂಪಿಸಿದ್ದೇವೆ. ಈ ಮೂಲಕ ರಾಜಕಾಲುವೆ ಒತ್ತುವರಿ ಕೂಡ ತಡೆಗಟ್ಟಿದಂತಾಗುತ್ತೆ. ಟಿಡಿಆರ್ ಪ್ರಕಾರ ಅವರಿಗೆ ಪರಿಹಾರ ನೀಡಲು ಮುಂದಾಗುತ್ತೇವೆ. ಬಿಬಿಎಂಪಿ ಪ್ರತಿ ವಲಯದಲ್ಲಿ ಬ್ಲಾಕ್ಸ್ಪಾಟ್ ಗುರುತಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಲಿಂಕ್
ಯಾವ ವಲಯ, ಯಾವ ವಾರ್ಡ್ನಲ್ಲಿ ಮಳೆ ಬಂದಾಗ ಮಳೆ ನೀರು ನುಗ್ಗುತ್ತಿದೆ ಎಂದು ಗುರತಿಸಬೇಕು. ಎಲ್ಲಾ ಕೆರೆಗಳನ್ನು ರಾಜಕಾಲುವೆಗೆ ಸಂಪರ್ಕ ನೀಡಲು ಮಾಸ್ಟರ್ ಪ್ಲಾನ್ ಮಾಡುತ್ತೇವೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಲಿಂಕ್ ಮಾಡಬೇಕು. ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿ ದುಡಿದಿದ್ದಾರೆ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಅವರವರ ವಾರ್ಡ್ ಝೋನ್ಗಳಲ್ಲಿ ಶ್ರಮ ಪಟ್ಟಿದ್ದಾರೆ. ಆದರೆ ಮಳೆ ನಮ್ಮ ನಿಮ್ಮ ಯಾರ ಕೈಯಲ್ಲೂ ಇಲ್ಲ. ನೂರು ವರ್ಷದಲ್ಲೇ ಇತಿಹಾಸ ನಿರ್ಮಿಸಿದ ಮಳೆ ಈ ಬಾರಿ ಮಳೆ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಈ ಬಾರಿ ಆಗಿದೆ. ಮಳೆ ಬಂದು ಯಾವ ಪ್ರಾಣ ಹಾನಿ ಆಗಿಲ್ಲ. ನೀರಿನಲ್ಲಿ ಆಟವಾಡಲು ಹೋಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಕಟ್ಟಡ ಕುಸಿದು 8 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅನಧಿಕೃತವಾಗಿ ಕಟ್ಟಡ ನಿರ್ಮಾಣದ ಮೇಲೆ ನಾವು ಕಣ್ಣಿಡುತ್ತೇವೆ. ಅನಧಿಕೃತವಾಗಿ ಕಟ್ಟಿದ ಕಟ್ಟಡ ಡೆಮಾಲಿಷನ್ಗೆ ಆದೇಶ ಮಾಡಿದ್ದೇನೆ. ಯಾವುದೇ ಮುಲಾಜಿಲ್ಲದೆ ತೋರದೆ ಡೆಮಾಲಿಷನ್ ಮಾಡಬೇಕು ಅಂತ ಹೇಳಿದ್ದೇನೆ. ಗ್ರೌಂಡ್ ಫ್ಲೋರ್ ಪ್ಲಸ್ ಮೂರು ಅಂತಸ್ತಿಗಿಂತ ಹೆಚ್ಚಿಗೆ ಕಟ್ಟಿದ ಕಟ್ಟಡ ಡೆಮಾಲಿಷನ್ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಕ್ಕಳನ್ನು ಶಾಲೆಗೆ ಕಳಿಸಲು ಥರ್ಮೋಕೋಲ್ ಶೀಟನ್ನು ಬೋಟ್ನಂತೆ ಬಳಸಿದ ಪೋಷಕರು
ಬಿಎಂಟಿಎಫ್, ಬಿಡಿಎ, ಬಿರಂಆರ್ಡಿ ಮೂಲಕ ನಾವು ಕಾನೂನು ತರುತ್ತೇವೆ. ಅನಧಿಕೃತವಾಗಿ ನಿರ್ಮಾಣ ಆಗಿರುವ ಲೇಔಟ್, ಸೈಟ್ ಎಲ್ಲವೂ ನಿಲ್ಲಿಸಲು ಹೊಸ ಕಾನೂನು ಜಾರಿ ಮಾಡುತ್ತಿದ್ದೇವೆ. ನಿರ್ಮಾಣ ಹಂತದ ಕಟ್ಟಡಗಳನ್ನು ಸರ್ವೇ ಮಾಡಬೇಕು. ಆ ಸರ್ವೇ ಆಧಾರದ ಮೇರೆಗೆ ಅಕ್ರಮ ಕಟ್ಟಡ ಅಂತ ಗೊತ್ತಾದ್ದರೆ ನಿರ್ಮಾಣ ಸ್ಥಗಿತ ಮಾಡಿ ಡೆಮಾಲಿಷನ್ ಮಾಡಬೇಕು. ಮುಂದಿನ ಸೋಮವಾರದಿಂದ ಸರ್ವೇ ಆರಂಭವಾಗಲಿದೆ. ಡ್ರೋನ್ ಮೂಲಕ ಸರ್ವೇ ಮಾಡಲು ಸೂಚಿಸಲಾಗಿದೆ. ಡ್ರೈನೇಜ್ಗಳನ್ನು ಡಿ ಶಿಲ್ಟ್ ಮಾಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.