ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್​ ತೆರಳಿದ್ದ ಉದ್ಯಮಿ ಮಗ ನಾಪತ್ತೆ: ಡ್ರೋನ್ ಮೂಲಕ ಶೋಧ!

Shivagange Trekker Missing: ಟ್ರಕ್ಕಿಂಗ್​​ಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ನಾಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ನಡೆದಿದೆ. ಸದ್ಯ ಪೊಲೀಸರಿಂದ ಶೋಧ ಕಾರ್ಯ ನಡೆದಿದ್ದು, ಇತ್ತ ವೈಟ್​ಫೀಲ್ಡ್​ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿದೆ.

ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್​ ತೆರಳಿದ್ದ ಉದ್ಯಮಿ ಮಗ ನಾಪತ್ತೆ: ಡ್ರೋನ್ ಮೂಲಕ ಶೋಧ!
ಯುವಕ ನಾಪತ್ತೆ
Image Credit source: tv9 kannada
Edited By:

Updated on: Aug 08, 2026 | 5:50 PM

ಮುಖ್ಯಾಂಶಗಳು

  • ಟ್ರಕ್ಕಿಂಗ್​ ತೆರಳಿದ್ದ ತೆರಳಿದ್ದ ಯುವಕ ನಾಪತ್ತೆ
  • ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಘಟನೆ
  • ಡ್ರೋನ್ ಕ್ಯಾಮರಾ ಮೂಲಕ ಪರಿಶೀಲನೆ ಮಾಡ್ತಿರುವ ಪೊಲೀಸರು

ನೆಲಮಂಗಲ, ಆಗಸ್ಟ್​​ 08: ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಉದ್ಯಮಿಯ ಮಗ ಅನುಮಾನಾಸ್ಪದವಾಗಿ ನಾಪತ್ತೆ (missing) ಆಗಿರುವ ಘಟನೆ ನಡೆದಿದೆ. ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿರುವ ಉದ್ಯಮಿಯ ಮಗ. ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಆತನ ಮೊಬೈಲ್ ಫೋನ್ ಬೇರೊಂದು ಕಡೆ ಸ್ವಿಚ್ ಆಫ್ ಆಗಿರುವುದರಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಅದ್ವೈತ್ ಉಪಾಧ್ಯಾಯ ಐದು ದಿನಗಳ ಹಿಂದೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ ಬಾಡಿಗೆಗೆ ಪಡೆದು ಶಿವಗಂಗೆಗೆ ಬಂದಿದ್ದ. ಬೆಟ್ಟದ ಕೆಳಭಾಗದಲ್ಲಿ ಬೈಕ್ ಪಾರ್ಕ್ ಮಾಡಿ, ನಿನ್ನೆ ಬೆಳಿಗ್ಗೆ ಬೆಟ್ಟ ಹತ್ತಿದ್ದ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ಆತ ಬೆಟ್ಟ ಹತ್ತಿದ ನಂತರ ವಾಪಸ್ ಬಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಶಾಂತಲಾ ಡ್ರಾಪ್ ಬಳಿ ಪೊಲೀಸರ ಶೋಧ 

ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟವು ಮರಗಿಡಗಳು ಹಾಗೂ ಕಲ್ಲು ಬಂಡೆಗಳಿಂದ ಕೂಡಿದ್ದು ಅತ್ಯಂತ ಕಡಿದಾಗಿದೆ. ಬೆಟ್ಟದ ಮೇಲಿರುವ ಅತ್ಯಂತ ಅಪಾಯಕಾರಿ ತಾಣವಾದ ಶಾಂತಲಾ ಡ್ರಾಪ್ ಬಳಿ ಯುವಕ ಜಾರಿ ಬಿದ್ದಿರಬಹುದು ಅಥವಾ ಅಲ್ಲಿಯೇ ಎಲ್ಲಾದರೂ ಸಿಲುಕಿಕೊಂಡಿರಬಹುದು ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಬಸ್​ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು ದರ್ಪ: ಬಿಎಂಟಿಸಿ ಕಂಡಕ್ಟರ್ ಸಸ್ಪೆಂಡ್!

ಇನ್ನು ನೆಲಮಂಗಲ ಹಾಗೂ ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕಡಿದಾದ ಶಾಂತಲಾ ಡ್ರಾಪ್ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಯುವಕನ ಮೊಬೈಲ್ ಲೋಕೇಶನ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.

ದೂರು ನೀಡಿದ ಪತ್ನಿ

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದಾಗಿ ಅದ್ವೈತ್ ಹೇಳಿದ್ದರು. ನಿನ್ನೆ ಬೆಳಗ್ಗೆ 7.30ಕ್ಕೆ ಟ್ರೆಕ್ಕಿಂಗ್ ತೆರಳಿದ್ದು, ನಿನ್ನೆಯಿಂದಲೂ ಅವರ​ ಮೊಬೈಲ್​ ಸ್ವಿಚ್​ಆಫ್ ಆಗಿರುವ ಹಿನ್ನೆಲೆ ಇತ್ತ ಕಾಡುಗೋಡಿ ಠಾಣೆಗೆ ಅದ್ವೈತ್​ ಪತ್ನಿ ಪ್ರಾಪ್ತಿ ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ಎಫ್ಐಆರ್ ದಾಖಲಿಸಿರುವ ಕಾಡುಗೋಡಿ ಪೊಲೀಸರಿಂದ ದಾಬಸ್​ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಶಿವಗಂಗೆಯಲ್ಲಿ ಬೈಕ್ ಬಿಟ್ರೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ಡ್ರೋನ್​ ಮೂಲಕ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

31 Year Old Man Missing In Shivagange Hills | ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್​ಗೆ ತೆರಳಿದ್ದ ಯುವಕ ನಾಪತ್ತೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:07 pm, Sat, 8 August 26

Loading...
Unable to load recommendations.
Follow Us