ಎಸ್.ವ್ಯಾಸ ವಿಶ್ವವಿದ್ಯಾಲಯದ ನೂತನ ಆಯು ಆ್ಯಪ್ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಎಸ್ ವ್ಯಾಸ ವಿಶ್ವವಿದ್ಯಾಲಯದ 24ನೇ ಇನ್ಕೋಫೈರಾ ಕಾರ್ಯಕ್ರಮದಲ್ಲಿ ರೋಗ ಮುಕ್ತ ಭಾರತ ಪರಿಕಲ್ಪನೆಯ ಅಂಗವಾಗಿ ಇನ್ಕೋಫೈರಾ ಸಂಸ್ಥೆ ಸಿದ್ದಪಡಿಸಿದ ನೂತನ ಆಯು ಆ್ಯಪ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಆನೇಕಲ್: ಕೋವಿಡ್ನಿಂದಾಗಿ ಶಾಲಾ ಕಾಲೇಜುಗಳ ಮಕ್ಕಳ ಮೇಲೆ ಒತ್ತಡದಲ್ಲಿದ್ದಾರೆ. ವಿದ್ಯಾರ್ಥಿಗಳು ಒತ್ತಡರಹಿತರಾಗಿ ವಿದ್ಯಾಭ್ಯಾಸ ಮಾಡುವ ವಾತಾವರಣ ಇರಬೇಕು. ಈ ಹಿನ್ನೆಲೆಯಲ್ಲಿ ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಯೋಗಾಭ್ಯಾಸ ಪರಿಚಯ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಹೊರವಲಯದ ಜಿಗಣಿಯಲ್ಲಿನ ಎಸ್ ವ್ಯಾಸ ವಿಶ್ವವಿದ್ಯಾಲಯದ 24ನೇ ಇನ್ಕೋಫೈರಾ ಕಾರ್ಯಕ್ರಮದಲ್ಲಿ ರೋಗ ಮುಕ್ತ ಭಾರತ ಪರಿಕಲ್ಪನೆಯ ಅಂಗವಾಗಿ ಇನ್ಕೋಫೈರಾ ಸಂಸ್ಥೆ ಸಿದ್ದಪಡಿಸಿದ ನೂತನ ಆಯು ಆ್ಯಪ್ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮುಂದಿನ ವರ್ಷದಿಂದ ಹೈಸ್ಕೂಲು, ಕಾಲೇಜು ಹಂತದಲ್ಲಿ ಯೋಗಾಭ್ಯಾಸ ತರಗತಿಗಳು ಬರಲಿವೆ. ಈ ಸಂಬಂಧ ಪರಿಣಿತರ ಜತೆ ಚರ್ಚೆ ಮಾಡಿ, ಬಳಿಕ ಯೋಗ ಪಠ್ಯಕ್ರಮ ಸಿದ್ಧಪಡಿಸುತ್ತೇವೆ ಎಂದು ಹೇಳಿದರು. ಎಸ್. ವ್ಯಾಸ ಯೋಗ ಯೂನಿವರ್ಸಿಟಿ ಕುಲಪತಿ ನಾಗೇಂದ್ರ ಗುರೂಜಿ ಭಾಗಿಯಾಗಿದ್ದರು. ಜರ್ನಲ್ ಆಪ್ ಅಪ್ಲೈಡ್ ಕಾಂನ್ಸಿಯಸ್ನೆಸ್ ಸ್ಟಡೀಸ್ ಹಾಗೂ ಎಸ್.ವ್ಯಾಸ ರಿಪೋರ್ಟ್ಸ್ ಎಂಬ ಎರಡು ಪುಸ್ತಕಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ
ಜೂನ್ 21ಕ್ಕೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಮೈಸೂರಿನಲ್ಲಿ ವಿಶೇಷವಾಗಿ ಯೋಗಾ ದಿನದ ಆಚರಣೆ ಇರಲಿದೆ. ಪ್ರಧಾನಿ ಮೋದಿಯವರು ಭಾಗವಹಿಸುತ್ತಿದ್ದಾರೆ. ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ. ಮೋದಿಯವರು ಪಾಲ್ಗೊಳ್ಳುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ ಎಂದು ಹೇಳಿದರು.
ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ನಗರದ ರೇಸ್ ಕೋರ್ಸ್ ಆವರಣದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಯೋಗ ದಿನಾಚರಣೆ ಕುರಿತು ಪೋಸ್ಟರ್ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 2017ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದ ಮೈಸೂರು, ಮತ್ತೆ ಗಿನ್ನೆಸ್ ದಾಖಲೆ ಸೇರಲು ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತೆ ನಡೆದಿದ್ದು, ಈ ಬಾರಿ 2 ಲಕ್ಷ ಯೋಗಪಟುಗಳನ್ನು ಸೇರಿಸುವ ಆಶಯವಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮೋದಿ ಮೈಸೂರಿಗೆ ಬರುವ ಬಗ್ಗೆ ಗೊಂದಲ ಇತ್ತು. ಆದರೆ ಪ್ರಧಾನಿ ಕಾರ್ಯಾಲಯ ಇದೀಗ ಮೋದಿ ಬರುವ ಬಗ್ಗೆ ಸ್ಪಷ್ಟತೆ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.