ಜಿಮ್ ಡಂಬಲ್ನಿಂದ ಹೆಂಡತಿಯ ತಲೆ ಜಜ್ಜಿದ ಗಂಡ: ಪಾಪ ಪ್ರಜ್ಞೆಯಿಂದ ತಾನೂ ಆತ್ಮಹತ್ಯೆಗೆ ಶರಣು
ಸೈಟ್ ಮಾರುವ ವಿಚಾರಕ್ಕೆ ಶುರುವಾದ ದಂಪತಿ ಜಗಳ ಬಳಿಕ ಕೊಲೆಯಲ್ಲಿ ಅಂತ್ಯವಾಗಿರುವಂತಹ ದಾರುಣ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಪತ್ನಿಯನ್ನು ಕೊಂದ ಗಂಡ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಪತ್ತೆ ಆಗಿದೆ.

ದೇವನಹಳ್ಳಿ, ಮೇ 28: ಆ ಕುಟುಂಬ 20 ವರ್ಷಗಳ ಹಿಂದೆ ಹಾಸನದಿಂದ ಬೆಂಗಳೂರಿನ ಹೊರ ವಲಯಕ್ಕೆ ಬಂದಿದ್ದು ಬ್ಯುಸಿನೆಸ್ನಲ್ಲಿ ಚೆನ್ನಾಗೆ ದುಡಿದು ಸ್ವಂತ ಮನೆ, ಸೈಟ್ ಎಲ್ಲಾ ಮಾಡಿಕೊಂಡಿದ್ದರು. ಆದರೆ ಈ ನಡುವೆ ಸೈಟ್ ಮಾರುವ ವಿಚಾರಕ್ಕೆ ಗಂಡ-ಹೆಂಡತಿ (Husband and wife) ನಡುವೆ ಕಲಹ ಶುರುವಾಗಿದೆ. ಸಣ್ಣ ವಿಚಾರಕ್ಕೆ ಶುರುವಾದ ಈ ಜಗಳ ಇಬ್ಬರ ಕೋಪದಿಂದ ಕುಟುಂಬವೇ ಬಲಿಯಾಗಿರುವಂತಹ (death) ಘಟನೆ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ದಂಪತಿಗಳ ಜಗಳ: ಕೊಲೆಯಲ್ಲಿ ಅಂತ್ಯ
ಅಂದಹಾಗೆ ಗಂಡನೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಮೂಲತಃ ಹಾಸನ ಮೂಲದ ಬಸವಾಚಾರಿ ಮತ್ತು ಸುಮಾ ದಂಪತಿ ಕಳೆದ 16 ವರ್ಷದ ಹಿಂದೆ ಮದುವೆಯಾಗಿ ವಿಜಯಪುರ ಪಟ್ಟಣಕ್ಕೆ ಬಂದಿದ್ದು, ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಇದನ್ನೂ ಓದಿ: ರೇವ್ ಪಾರ್ಟಿ ಮೇಲೆ ದಾಳಿ: ನಶೆಯಲ್ಲಿ ತೇಲಾಡುತ್ತಿದ್ದ 30ಕ್ಕೂ ಹೆಚ್ಚು ಯುವಕ-ಯುವತಿಯರು ವಶಕ್ಕೆ
ಮೊದಲಿಗೆ ವ್ಯಾಪಾರ ಚೆನ್ನಾಗಿದ್ದು, ಈ ಕಾರಣಕ್ಕೆ ಸ್ವಂತ ಮನೆ, ಸೈಟ್ ಎಲ್ಲಾ ಖರೀದಿ ಮಾಡಿದ್ದು ಎಲ್ಲವೂ ಚೆನ್ನಾಗೆ ನಡೆದುಕೊಂಡು ಬರ್ತಿತ್ತು. ಹೀಗಿರುವಾಗ ಒಂದು ದಿನ ಮನೆಯಲ್ಲಿದ್ದ ದಂಪತಿ ಬೆಳಗ್ಗೆ ಮಕ್ಕಳನ್ನ ಶಾಲೆಗೆ ಕಳಿಸಿದವರು ನಂತರ ಸೈಟ್ ಒಂದರ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ಇನ್ನೂ ಇದೇ ಜಗಳ ನೋಡ ನೋಡ್ತಿದ್ದಂತೆ ಇಬ್ಬರ ನಡುವೆ ವಿಕೋಪಕ್ಕೆ ತೆರಳಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ.
ಇನ್ನೂ ಈ ವೇಳೆ ಕೋಪದಲ್ಲಿ ಮನೆಯಲ್ಲಿದ್ದ ಜಿಮ್ ಡಂಬಲ್ನಿಂದ ಗಂಡ ಪತ್ನಿಯ ತಲೆಗೆ ಹೊಡೆದಿದ್ದು, ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತ ಸಾವ್ರವಾಗಿ ಸಾವನ್ನಪಿದ್ದಾಳೆ. ಇನ್ನೂ ಪತ್ನಿ ಸಾವನ್ನಪುತ್ತಿದ್ದಂತೆ ಗಂಡನಿಗೆ ಭಯ ಶುರುವಾಗಿದ್ದು, ಆತುರದಲ್ಲಿ ಪತ್ನಿಯನ್ನ ಕೊಂದ ಆತಂಕದಲ್ಲಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆ ತಾಯಿ ಬೆಡ್ ಮೇಲೆ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ತಂದೆ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ಭೀಕರ ದೃಶ್ಯ ಕಂಡು ಬೆಚ್ಚಿ ಬಿದಿದ್ದಾರೆ. ಇನ್ನೂ ತಂದೆ-ತಾಯಿಯ ಶವಗಳನ್ನ ನೋಡ್ತಿದ್ದಂತೆ ಮಕ್ಕಳು ಕೂಡಲೇ ದೊಡ್ಡಪ್ಪನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ ಏನಿದೆ?
ಮನೆ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ಮತ್ತು ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದೆ. ಜೊತೆಗೆ ಡೆತ್ ನೋಟ್ನಲ್ಲಿ ಸೈಟ್ನ 26 ಲಕ್ಷ ರೂ ಹಣ ಬರಲಿದ್ದು, ಆ ಹಣವನ್ನ ಮಕ್ಕಳ ಹೆಸರಿನಲ್ಲಿ ಅಕೌಂಟ್ಗೆ ಹಾಕಿ. ನಮ್ಮ ಸಾವಿಗೆ ನಾವೇ ಹೊಣೆ ಅಂತ ಬರೆದಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಹಾಸನದಿಂದ ಸಂಬಂಧಿಕರು ದೌಡಾಯಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಹಾಸನಕ್ಕೆ ಕುಟುಂಬ ಶಿಫ್ಟ್ ಆಗುವ ಪ್ಲ್ಯಾನ್ ಮಾಡಿದ್ದರು, ಆದರೆ ಅಷ್ಟರಲ್ಲೇ ಈ ರೀತಿಯಾಗಿದೆ ಅಂತ ದಂಪತಿಗಳ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಆನೇಕಲ್: ಸೂಟ್ಕೇಸ್ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ
ಒಟ್ಟಾರೆ ಇರುವುದಕ್ಕೆ ಒಂದು ಮನೆ, ದುಡಿಯೋಕ್ಕೆ ಒಂದು ಅಂಗಡಿ ಸೇರಿದಂತೆ ಎಲ್ಲವೂ ಚೆನ್ನಾಗಿದ್ದರೂ ಸಣ್ಣ ಹಣಕಾಸಿನ ವಿಚಾರ ದಂಪತಿಗಳ ಜೀವವನ್ನು ತೆಗೆದಿದ್ದು, ಇಬ್ಬರೂ ಮುದ್ದಾದ ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದು ಮಾತ್ರ ನಿಜಕ್ಕೂ ದುರಂತ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







