ರೇವ್ ಪಾರ್ಟಿ ಮೇಲೆ ದಾಳಿ: ನಶೆಯಲ್ಲಿ ತೇಲಾಡುತ್ತಿದ್ದ 30ಕ್ಕೂ ಹೆಚ್ಚು ಯುವಕ-ಯುವತಿಯರು ವಶಕ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಕೋಕೇನ್, ಹೈಡ್ರೋ ಮತ್ತು ಗಾಂಜಾ ಪತ್ತೆಯಾಗಿದೆ. ಜೊತೆಗೆ 30ಕ್ಕೂ ಹೆಚ್ಚು ಯುವಕ-ಯುವತಿ ಭಾಗಿಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ದೇವನಹಳ್ಳಿ, ಮೇ 25: ರೇವ್ ಪಾರ್ಟಿ (rave party) ನಡೆಯುತ್ತಿದ್ದ ಫಾರ್ಮ್ ಹೌಸ್ ಮೇಲೆ ದೇವನಹಳ್ಳಿ ಪೋಲಿಸರು (police) ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ನಡೆದಿದೆ. ನಿನ್ನೆ ರಾತ್ರಿಯಿಂದ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿಯಾಗಿದ್ದು, ಕುಡಿದ ಮತ್ತಿನಲ್ಲಿ ತೇಲಾಡಿದ್ದಾರೆ. ಇನ್ನು ದಾಳಿ ವೇಳೆ ಕೊಕೇನ್, ಹೈಡ್ರೋ ಡ್ರಗ್ಸ್ ಮತ್ತು ಗಾಂಜಾ ಪತ್ತೆ ಆಗಿದ್ದು, ವಶಕ್ಕೆ ಪಡೆಯಲಾಗಿದೆ.
ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 10 ಯುವತಿಯರು, 20 ಯುವಕರ ತಪಾಸಣೆ ಮಾಡಲಾಗಿದ್ದು, ಸದ್ಯ ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದಲ್ಲಿ ಎಲ್ಲರನ್ನೂ ವಿಚಾರಣೆ ಮಾಡಲಾಗಿದೆ.
ಅಪಾರ್ಟ್ಮೆಂಟ್ನಲ್ಲಿ ಕೋಟ್ಯಂತರ ಮೌಲ್ಯದ ಗಾಂಜಾ ಪತ್ತೆ
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಕರ್ಪೂರು ಬಳಿ ಇತ್ತೀಚೆಗೆ ಅಪಾರ್ಟ್ಮೆಂಟ್ ಪ್ಲಾಟ್ನಲ್ಲಿ ಕೋಟಿ ಕೋಟಿ ರೂ. ಮೌಲ್ಯದ 169 ಕೆಜಿ ಗಾಂಜಾ, ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಡ್ರಗ್ಸ್ ಮಾತ್ರೆಗಳು ಪತ್ತೆಯಾಗಿದ್ದ ಘಟನೆ ನಡೆದಿತ್ತು. ಇದೀಗ ಎಸ್ಕೇಪ್ ಆಗಿರುವ ಗಾಂಜಾ ಪೆಡ್ಲರ್ಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಹಾವಳಿ: ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ!
ಅಪಾರ್ಟ್ಮೆಂಟ್ನ ಎರಡನೇ ಮಹಡಿಯ 109 ಪ್ಲಾಟ್ನಲ್ಲಿದ್ದ ನಾಲ್ವರು ಮೊದಲ ಮಹಡಿಯಿಂದ ಜಂಪ್ ಮಾಡಿದ್ದು, ಓರ್ವ ಕಾಲು ಮುರಿದುಕೊಂಡು ಕುಸಿದು ಬಿದ್ದರೆ ಉಳಿದ ಮೂವರು ಎಸ್ಕೇಪ್ ಆಗಿದ್ದರು. ಅಲ್ಲಿ ಸಿಕ್ಕ ನೂರಾರು ಕೆಜಿ ಗಾಂಜಾ ಮತ್ತು ಕೇರಳ ಮೂಲದ ಓರ್ವ ಆರೋಪಿ ಸಚಿನ್ ಎಂಬಾತನನ್ನ ವಶಕ್ಕೆ ಪಡೆದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: UPSC Exam: ಮೇ 25 ರಂದು ನಮ್ಮ ಮೆಟ್ರೋ ಸಂಚಾರ 1 ಗಂಟೆ ಮುಂಚಿವಾಗಿ ಆರಂಭ
ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರ ಮೂರು ತಂಡಗಳನ್ನಾಗಿ ಮಾಡಿ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







