ದೇವನಹಳ್ಳಿಯಲ್ಲಿ ಮತ್ತೊಂದು ಭೂಸ್ವಾಧೀನ ವಿವಾದ: ರೈತರ ಜಮೀನು ಬಿಎಂಟಿಸಿ ಡಿಪೋಗೆ ಮಂಜೂರು
ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ 1,777 ಎಕರೆ ಫಲವತ್ತಾದ ಕೃಷಿ ಭೂಮಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಿದೆ. ಆದರೆ ಇದೀಗ ದಶಕಗಳಿಂದ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಬಿಎಂಟಿಸಿ ಡಿಪೋಗೆ ಸರ್ಕಾರ ಮಂಜೂರು ಮಾಡಿದೆ. ರೈತರಿಗೆ ಮಂಜೂರಾಗಿದ್ದ ಜಮೀನು ಬಿಎಂಟಿಸಿಗೆ ಕೊಟ್ಟಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ದೇವನಹಳ್ಳಿ, ಜುಲೈ 17: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ ಒಟ್ಟ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ (Land acquisition) ನಿರ್ಧಾರವನ್ನು ರಾಜ್ಯ ಸರ್ಕಾರ ಈಗಾಗಲೇ ಹಿಂತೆಗೆದುಕೊಂಡಿದೆ. ಆ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿದ್ದ ರೈತರ ಅವಿರತ ಹೋರಾಟಕ್ಕೆ ಭರ್ಜರಿ ಜಯ ಸಿಕ್ಕಂತಾಗಿದೆ. ಹೀಗಿರುವಾಗ ಇದೀಗ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಸರ್ಕಾರ ಬಿಎಂಟಿಸಿ (BMTC) ಡಿಪೋಗೆ ಮಂಜೂರು ಮಾಡಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಜಮೀನು ಕೊಡುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.
13 ಎಕರೆ ಜಮೀನು ಬಿಎಂಟಿಸಿ ಡಿಪೋಗೆ ಮಂಜೂರು
ಬೆಂಗಳೂರು ಪೂರ್ವ ತಾಲೂಕಿನ ಹಂಚರಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂ.52ರಲ್ಲಿನ 16 ಎಕರೆ 22 ಗುಂಟೆ ಜಮೀನಿನಲ್ಲಿ 13 ಎಕರೆ ಜಮೀನನ್ನು ಸರ್ಕಾರ ಬಿಎಂಟಿಸಿ ಡಿಪೋಗೆ ಮಂಜೂರು ಮಾಡಿದೆ. ಈ ವಿಚಾರ ರೈತರ ಗಮನಕ್ಕೂ ತರದೆ ಬಿಎಂಟಿಸಿಗೆ ಜಮೀನು ನೀಡಿರುವ ಆರೋಪ ಕೂಡ ಕೇಳಿಬಂದಿದೆ.
ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು, 1,777 ಎಕ್ರೆ ಜಮೀನಿಗಾಗಿ 1198 ದಿನ ನಡೆದ ರೈತರ ಹೋರಾಟಕ್ಕೆ ಜಯ
ಇನ್ನು ಇದೇ ಜಮೀನಿನಲ್ಲಿ 80 ಕುಟುಂಬಗಳು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ರೈತರಿಗೆ ಮಂಜೂರಾಗಿದ್ದ ಜಮೀನು ಬಿಎಂಟಿಸಿಗೆ ಕೊಟ್ಟಿರುವುದಕ್ಕೆ ಬಿಎಂಟಿಸಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಎಂಟಿಸಿಗೆ ಜಮೀನು ಕೊಡುವುದಿಲ್ಲ. ನಮಗೆ ನ್ಯಾಯ ಕೊಡಿಸಿ ಅಂತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ದೇವನಹಳ್ಳಿಯ ರೈತರ ಈ ಐತಿಹಾಸಿಕ ಗೆಲುವು
ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಪ್‌ಮೆಂಟ್ ಬೋರ್ಡ್, ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ ಸರ್ಕಾರಕ್ಕೆ ಭೂಮಿ ಬೇಕಿತ್ತು. ಹೀಗೆ ಹುಡುಕಾಡಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ಕಣ್ಣಿಗೆ ಬಿದ್ದಿದ್ದು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಗ್ರಾಮಗಳ 1,777 ಎಕರೆ ಜಮೀನು.
ಬೊಮ್ಮಾಯಿ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ ಭೂಸ್ವಾಧೀನದ ಪ್ರತಿಕ್ರಿಯೆ ಆರಂಭಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಪ್ರತಿಕ್ರಿಯೆಯನ್ನ ಮುಂದುವರೆಸಿತ್ತು. ಭೂ ಸ್ವಾಧಿನ ಹಾಗೂ ಕೈಬಿಡುವ ಪ್ರಕ್ರಿಯೆ ಬಗ್ಗೆ ಸಾಕಷ್ಟು ದೊಡ್ಡ ಪ್ರಮಾಣದ ಚರ್ಚೆಯಾಗುತ್ತಲೇ ಇತ್ತು.
ಇದನ್ನೂ ಓದಿ: ದೇವನಹಳ್ಳಿ ಭಾಗದ 13 ಹಳ್ಳಿಗಳ ಸುತ್ತಮುತ್ತ ಭೂಸ್ವಾಧೀನ: ಷರತ್ತು ವಿಧಿಸಿದ ರೈತರು
ತಮ್ಮ ಭೂಮಿ ಉಳಿಸಿಕೊಳ್ಳಲು 2022ರ ಏಪ್ರಿಲ್ 4ರಿಂದ ರೈತರು ಹೋರಾಟ ಆರಂಭಿಸಿದ್ದರು. ಅಲ್ಲಿಂದ ಇಲ್ಲಿವರೆಗೆ 1 ಸಾವಿರದ 198 ದಿನಗಳ ಕಾಲ ಸತತವಾಗಿ ಪ್ರತಿಭಟಿಸುತ್ತಲೇ ಬಂದಿದ್ದರು. ಇದೀಗ ಇತ್ತೀಚೆಗೆ ರೈತರ ಹೋರಾಟಕ್ಕೆ ಕೊನೆಗೂ ಸರಕಾರ ಬಗ್ಗಿದೆ. ಆ ಮೂಲಕ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







