AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚ್ಛೇದಿತ ಹೆಂಡತಿ, ಕಾರಲ್ಲಿ ಕುಳಿತು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಡ್ರಾಮಾ! ಮಾಜಿ ಗಂಡ ಹೇಳೋದೇನು?

ಅಪ್ಪ ಅಮ್ಮನ ಜೊತೆ ಆಡುತ್ತಾ ಕುಣಿಯುತ್ತಾ ನಲಿದಾಡಬೇಕಿದ್ದ ಪುಟ್ಟ ಕಂದಮ್ಮ ಅಪ್ಪ ಅಮ್ಮನ ಜಗಳದಲ್ಲಿ ಚಿಕ್ಕ ವಯಸ್ಸಿಗೇ ಕೋರ್ಟ್ ಮತ್ತು ಪೊಲೀಸ್ ಠಾಣೆಯ ಮೇಟ್ಟಿಲೇರುವ ಹಂತಕ್ಕೆ ಬಂದಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ಮಗುವಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚ್ಛೇದಿತ ಹೆಂಡತಿ, ಕಾರಲ್ಲಿ ಕುಳಿತು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಡ್ರಾಮಾ! ಮಾಜಿ ಗಂಡ ಹೇಳೋದೇನು?
ಕಾರಲ್ಲಿ ಕುಳಿತು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಡ್ರಾಮಾ!
TV9 Web
| Updated By: ಸಾಧು ಶ್ರೀನಾಥ್​|

Updated on: Mar 07, 2023 | 12:34 PM

Share

ಅವರಿಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದ ಗಂಡ-ಹೆಂಡತಿ, ಆ ಇಬ್ಬರ ಅನ್ಯೋನ್ಯ ಸಂಸಾರಕ್ಕೆ ಮುದ್ದಾದ ಹೆಣ್ಣು ಮಗು ಸಹ ಸಾಕ್ಷಿಯಾಗಿದ್ದು ಮಗುವಿಗೆ ಉತ್ತಮ ಭವಿಷ್ಯ ರೂಪಿಸಬೇಕಿತ್ತು. ಆದ್ರೆ ಭವಿಷ್ಯ ರೂಪಿಸುವ ಹೆತ್ತವರೇ ಒಂದೊಂದು ದಾರಿಯಾಗಿದ್ದು, ಇದೀಗ ಮುದ್ದು ಕಂದಮ್ಮನಿಗಾಗಿ ಗಂಡ ಠಾಣೆ ಮೆಟ್ಟಿಲೇರಿದರೆ ತಾಯಿ ಆತ್ಮಹತ್ಯೆ ಯತ್ನದ ದಾರಿ ತುಳಿದಿದ್ದಾರೆ. ನೊಡೋಕ್ಕೆ ಸೋ ಕ್ಯೂಟ್ ಮಗು ಅದು, ಮನೆಯ ತುಂಬಾ ತುಂಟಾಟವಾಡುತ್ತಾ ಓಡಾಡ್ತಿದ್ರೆ ತಂದೆ ತಾಯಿ ಇಬ್ಬರೂ ಮಗಳ ಆಟಾಟೋಪ ಕಂಡು ಸಂತೋಷ ಪಡಬೇಕಾಗಿತ್ತು. ಆದ್ರೆ ಆ ಸಂತೋಷಪಡುವ ಸಮಯದಲ್ಲಿಯೇ ತಂದೆ ತಾಯಿ ಇಬ್ಬರೂ ಪರಸ್ಪರ ಹೊಡೆದಾಟ ಬಡಿದಾಟಕ್ಕಿಳಿದಿದ್ದು ಮಗುವಿಗಾಗಿ ತಾಯಿ ಲೈವ್​ ವಿಡಿಯೋ ಮಾಡಿ ಸೂಸೈಡ್ ಯತ್ನ (suicide) ಮಾಡಿದ್ರೆ ಮಗಳಿಗೆ ಉತ್ತಮ ಭವಿಷ್ಯ ಕೊಡಬೇಕು ಅಂತ ತಂದೆ ಹೆಣಗಾಡುತ್ತಿದ್ದಾರೆ.

ಅಂದಹಾಗೆ ಇಲ್ಲಿ ಕಣ್ಣೀರು ಹಾಕುತ್ತಾ ನನ್ನ ಮಗಳು ನನಗೆ ಬೇಕು, ನಾನು ನೋಡೋಕ್ಕೂ ಆಗ್ತಿಲ್ಲ ಅಂತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸುತ್ತಿರುವ ಈಕೆಯ ಹೆಸರು ಸುಮಯಾ ಭಾನು. ಮೂಲತಃ ತುಮಕೂರಿನವಳಾದ ಈಕೆ ಮೊಹಮದ್ ಅಸಿಮ್ ಎಂಬುವವರನ್ನ ಮದುವೆಯಾಗಿದ್ದು ಎರಡು ವರ್ಷದಿಂದ ಇಬ್ಬರೂ ಬೇರೆಯಾಗಿದ್ದು, ನ್ಯಾಯಾಲಯದಲ್ಲಿ ಡೈವೋರ್ಸ್ (divorce) ತೆಗೆದುಕೊಂಡಿದ್ದಾರೆ. ಜತೆಗೆ ಪುಟ್ಟ ಮಗಳನ್ನ ತಾಯಿಯ ಸುಪರ್ದಿಗೆ ಕೊಟ್ಟಿದ್ದ ಕೋರ್ಟ್ ಆಗಾಗ ನೋಡಿಕೊಂಡು ಹೋಗುವುದಕ್ಕೆ ಗಂಡನಿಗೂ ಅವಕಾಶ ನೀಡಿತ್ತಂತೆ.

ಹೀಗಾಗಿ ಕಳೆದ ಜನವರಿಯಲ್ಲಿ ಮಗುವನ್ನ ನೋಡಿಕೊಂಡು ಬರುವುದಕ್ಕೆ ಎಂದೇ ಹೋಗಿದ್ದ ಮೊಹಮದ್ ಮಗುವನ್ನ ಕರೆದುಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (devanahalli) ಹೊರವಲಯದ ಒಜೋನ್ ಅರ್ಬನಾ ಅಪಾರ್ಟ್ಮೆಂಟ್ ಗೆ ಬಂದಿದ್ದು ತಾಯಿ ಮನೆಯಲ್ಲಿ ವಾಸವಾಗಿದ್ದನಂತೆ. ಹೀಗಾಗಿ ಮಗು ಇರುವ ವಿಚಾರ ತಿಳಿದು ಫ್ಲ್ಯಾಟ್​ಗೆ ಬಂದ ಪತ್ನಿ ಮತ್ತು ಗಂಡನ ನಡುವೆ ಗಲಾಟೆ ನಡೆದಿದ್ದು ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆದ್ರೆ ಈ ವೇಳೆ ಗಂಡ, ತನ್ನ ಮಾಜಿ ಪತ್ನಿಯೇ ಮಗುವನ್ನ ಸಾಕಲು ಆಗಲ್ಲ ಅಂತ ಪತ್ರದಲ್ಲಿ ಬರೆದುಕೊಟ್ಟಿದ್ದಾಳೆ ಅಂತ ಕೋರ್ಟ್ ಕಾಪಿ ತೋರಿಸಿದ್ದು ಪೊಲೀಸರು ವಿಚಾರ ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳುವಂತೆ ಹೇಳಿದ್ದಾರೆ. ಹೀಗಾಗಿ ಮಗಳನ್ನ ನೋಡಲು ಬಿಡ್ತಿಲ್ಲ ಅಂತ ಮನನೊಂದ ತಾಯಿ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆತ್ಮಹತ್ಯೆಗೆ ಯತ್ನಿಸಿದ ಸುಮಯಾ ಭಾನುಳನ್ನ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಈ ಬಗ್ಗೆ ಮೊದಲ ಪತಿ ಮೊಹಮದ್ ಆಸೀನ್ ನನ್ನ ಕೇಳಿದ್ರೆ ಮದುವೆಯಾಗಿ ಇಬ್ಬರೂ ಮ್ಯೂಚುವಲ್ ಡೈವೋರ್ಸ್ ತೆಗೆದುಕೊಂಡ ನಂತರ ಆಕೆಯೇ ತಾನು ಬೇರೊಂದು ಮದುವೆಯಾಗ್ತಿದ್ದು ಮಗುವನ್ನ ತೆಗೆದುಕೊಂಡು ಹೋಗು ಅಂತ ಕೋರ್ಟ್ ನಲ್ಲಿ ಪತ್ರದ ಮೇಲೆ ಸಹಿ ಮಾಡಿ ಕಳಿಸಿ ಕೊಟ್ಟಿದ್ದಾಳೆ.

ಆದ್ರೆ ಇದೀಗ ಈ ಹಿಂದೆ ನಮ್ಮ ಮಗು ಮೇಲೆ ಹಲ್ಲೆ ಮಾಡಲು ಬಂದಿದ್ದ ಚಂದು ಎಂಬುವವನ ಜೊತೆ ಸೇರಿಕೊಂಡು ನನ್ನ ಮೇಲೆ ಈ ರೀತಿ ಇಲ್ಲಸಲ್ಲದ ಆರೋಪ ಮಾಡ್ತಿದ್ದಾಳೆ ಅಂತ ಆರೋಪಿಸುತ್ತಾರೆ. ಅಲ್ಲದೆ ಮಗು ಬೇಕು ಅಂದ್ರೆ ಪೊಲೀಸ್ ಠಾಣೆಗೆ ಬರಬೇಕಿತ್ತು, ಆದ್ರೆ ರೌಡಿಗಳನ್ನ ಕರೆದುಕೊಂಡು ನಮ್ಮ ಫ್ಲ್ಯಾಟ್ ಗೆ ಹಲ್ಲೆ ಮಾಡಲು ಬಂದಿದ್ದಾಳೆ ಅಂತಿದ್ದು ಮಾಜಿ ಪತ್ನಿ ಸೇರಿದಂತೆ 6 ಜನರ ವಿರುದ್ದ ಮೊಹಮದ್ ಆಸೀನ್ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಒಟ್ಟಾರೆ ಅಪ್ಪ ಅಮ್ಮನ ಜೊತೆ ಆಡುತ್ತಾ ಕುಣಿಯುತ್ತಾ ನಲಿದಾಡಬೇಕಿದ್ದ ಪುಟ್ಟ ಕಂದಮ್ಮ ಅಪ್ಪ ಅಮ್ಮನ ಜಗಳದಲ್ಲಿ ಚಿಕ್ಕ ವಯಸ್ಸಿಗೇ ಕೋರ್ಟ್ ಮತ್ತು ಪೊಲೀಸ್ ಠಾಣೆಯ ಮೇಟ್ಟಿಲೇರುವ ಹಂತಕ್ಕೆ ಬಂದಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ವರದಿ: ನವೀನ್, ಟಿವಿ 9, ದೇವನಹಳ್ಳಿ