ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ
ನಿಧಿ ಆಸೆಗೆ 8 ತಿಂಗಳ ಮಗುವನ್ನು ಬಲಿ ನೀಡಲು ಪೋಷಕರು ಯತ್ನಿಸಿರುವ ಆರೋಪ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಕೇಳಿಬಂದಿದೆ. ಮನೆಯಲ್ಲಿ ಪೂಜೆ ನಡೆಯುವಾಗ ಮಕ್ಕಳ ರಕ್ಷಣಾ ಘಟಕ ದಾಳಿ ಮಾಡಿ ಮಗುವನ್ನು ರಕ್ಷಿಸಿದೆ. ಮಗುವನ್ನು ದಂಪತಿ ಕಾನೂನು ಬಾಹಿರವಾಗಿ ದತ್ತು ಪಡೆದಿದೆ ಎನ್ನಲಾಗಿದ್ದು, ಘಟನೆ ಬಗ್ಗೆ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯಿಂದ ತನಿಖೆ ನಡೆಯುತ್ತಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೇವನಹಳ್ಳಿ, ಜನವರಿ 04: ನಿಧಿ ಆಸೆಗಾಗಿ ನಡೆಸಿದ ಪೂಜೆಗಾಗಿ ಪೋಷಕರು ಮಗುವನ್ನೇ ಬಲಿ ಕೊಡಲು ಹೋಗಿರುವ ಘಟನೆ ನಡೆದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ಕೇಳಿಬಂದಿದೆ. ಮನೆಯಲ್ಲಿ ಗುಂಡಿ ತೆಗೆದು ಮಗು ಬಲಿಗಾಗಿ ಪೂಜೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಈ ವೇಳೆ ನಿಖರ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ.
ಮನೆಯ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ
ಸೈಯದ್ ಇಮ್ರಾನ್ ಎಂಬುವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆದಿದ್ದು, ಬೇರೆಯವರಿಂದ ಗಂಡು ಮಗುವನ್ನು ಇವರು ಖರೀದಿಸಿದ್ದರು ಎನ್ನಲಾಗಿದೆ. ನಿನ್ನೆ ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡ್ತಿದ್ದಾರೆ ಎಂಬ ಬಗ್ಗೆ ಸಹಾಯವಾಣಿಗೆ ಅಪರಿಚಿತ ಕರೆ ಬಂದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ ಮನೆ ಪರಿಶೀಲನೆ ಮಾಡಿದ್ದಾರೆ. ಈ ಮೇಳೆ ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ಅಧಿಕಾರಿಗಳು 8 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದು, ಶಿಶು ಕೇಂದ್ರಕ್ಕೆ ಅದನ್ನು ರವಾನಿಸಿದ್ದಾರೆ. ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯಿಂದ ಬಲಿ ಪೂಜೆ ಆರೋಪದ ಬಗ್ಗೆ ತನಿಖೆ ನಡೆಯುತ್ತಿದ್ದು, ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
8 ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಸೈಯದ್ ಇಮ್ರಾನ್ ಮಗುವನ್ನ ದತ್ತು ಪಡೆದುಕೊಂಡಿದ್ದರು. ದತ್ತು ನಂತರ ತಮ್ಮ ಹೆಸರಿನಲ್ಲೆ ನಕಲಿ ಜನನ ಪ್ರಮಾಣ ಪತ್ರವನ್ನು ಸೈಯದ್ ಇಮ್ರಾನ್ ಮತ್ತು ಆತನ ಪತ್ನಿ ಮಾಡಿಸಿಕೊಂಡಿದ್ದರು. ಮಗು ದತ್ತು ಪಡೆದು ಅಗ್ರಿಮೆಂಟ್ ಸಹ ಮಾಡಿಕೊಂಡಿರುವುದಾಗಿ ದಾಳಿ ವೇಳೆ ದಂಪತಿ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಆದ್ರೆ ಕಾನೂನುಬದ್ದವಾಗಿ ದತ್ತು ಪಡೆದಿಲ್ಲ ಎಂದು ಮಗುವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.