ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಮಾಂಸ ಕಟ್​ ಮಾಡುತ್ತಿದ್ದವ ಅರೆಸ್ಟ್

ವನ್ಯಜೀವಿಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ. ಐದು ಜಿಂಕೆಗಳು, ಒಂದು ಕಾಡುಹಂದಿ, ಎರಡು ಬಂದೂಕುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೆಜಿಗೆ 3-4 ಸಾವಿರ ರೂಪಾಯಿಗೆ ಮಾಂಸ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಮಾಂಸ ಕಟ್​ ಮಾಡುತ್ತಿದ್ದವ ಅರೆಸ್ಟ್
ಆರೋಪಿ ಪ್ರತಾಪ್​ ಬಂಧನ

Updated on: Jun 29, 2025 | 9:53 PM

ನೆಲಮಂಗಲ, ಜೂನ್​ 29: ಕಾಡುಪ್ರಾಣಿಗಳನ್ನು ಕೊಂದು ಮಾರಾಟ ಮಾಡುತ್ತಿದ್ದ ಜಾಲ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದೆ. ಬನ್ನೇರುಘಟ್ಟ ಅರಣ್ಯ ವಲಯದಲ್ಲಿ (Bannerghatta Forest Zone) ಜಿಂಕೆ ಮಾಂಸ ಕತ್ತರಿಸುತ್ತಿದ್ದಾಗ ಕಗ್ಗಲೀಪುರ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರತಾಪ್ (31) ಬಂಧಿತ ಆರೋಪಿ. ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಶೆಡ್​ ನಿರ್ಮಿಸಿಕೊಂಡು ಆರೋಪಿ ಪ್ರತಾಪ್​ ಸೇರಿದಂತೆ ನಾಲ್ವರು ಪ್ರಾಣಿಗಳ ಮಾಂಸ ಕತ್ತರಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ಕಗ್ಗಲಿಪುರ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಅರಣ್ಯಾಧಿಕಾರಿಗಳ ಮೇಲೆ ಕತ್ತಿ ಬೀಸಿ ಪರಾರಿಯಾಗಿದ್ದು, ಪ್ರತಾಪ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೆಡ್‌ನ ಮಾಲೀಕ ಭೀಮಪ್ಪ, ಬಾಲರಾಜು ಹಾಗೂ ರಮೇಶ್ ಪರಾರಿಯಾದವರು. ಮಾಲೀಕ ಭೀಮಪ್ಪ ಬನ್ನೇರುಘಟ್ಟ ಅರಣ್ಯ ವಲಯದಲ್ಲಿನ ಸಿ.ಕೆ.ಪಾಳ್ಯದ ಶೆಡ್‌ನಲ್ಲಿ ಜಿಂಕೆ ಮಾಂಸ ಸಂಗ್ರಹಿಸಿದ್ದನು.

ಬೇಟೆಯಾಡಿ ಕೊಂದಿದ್ದ ಐದು ಜಿಂಕೆ, ನಾಲ್ಕು ಜಿಂಕೆಗಳ ಮಾಂಸ, ಒಂದು ಕಾಡುಹಂದಿ, ಒಂದು ಸಿಂಗಲ್ ಬ್ಯಾರೆಲ್ ಗನ್, ಒಂದು ಡಬಲ್ ಬ್ಯಾರೆಲ್ ಗನ್, 10 ಕಾರ್ಟ್ರಿಡ್ಜ್, ಕಾಡುಪ್ರಾಣಿಗಳ ಮಾಂಸ ಕಟ್ ಮಾಡಲು ಬಳಸಿದ್ದ ಮಚ್ಚು, ಸಿಲಿಂಡರ್‌ ಮತ್ತು ಕಾಡುಪ್ರಾಣಿಗಳ ಮಾಂಸ ಸರಬರಾಜು ಮಾಡಲು ಬಳಸಿದ್ದ ಕಾರನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳು ಕಾಡುಪ್ರಾಣಿಗಳ ಮಾಂಸವನ್ನು ಕೆಜಿಗೆ 3 ರಿಂದ 4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ
ಬನ್ನೇರುಘಟ್ಟ ಉದ್ಯಾನವನ: 3 ತಿಂಗಳಲ್ಲಿ 20ಕ್ಕೂ ಅಧಿಕ ವನ್ಯಜೀವಿಗಳು ಸಾವು
ಸಾಕು ನಾಯಿ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿ ಆತ್ಮಹತ್ಯೆ
ಸಿಂಹ, ಹುಲಿ ಜೊತೆಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭ
Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ಪ್ರಿಯರಿಗೆ ಗುಡ್​ ನ್ಯೂಸ್: ದೇಶದಲ್ಲಿ ಪ್ರಥಮ ಬಾರಿಗೆ ಇವಿ ಸಫಾರಿ ಬಸ್

ಅರಣ್ಯ ರಕ್ಷಕ ವಿನಯ್ ಕುಮಾರ್​ ಅವರು ಮೊದಲಿಗೆ ಆರೋಪಿಗಳ ಕೃತ್ಯವನ್ನು ಪತ್ತೆ ಹಚ್ಚಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಡಿಸಿಎಫ್ ರವೀಂದ್ರ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಗಣೇಶ್, ಕಾಂಬ್ಳೆ ಚಿದಾನಂದ್, ಶಿವರಾಜ್‌ ಹಾಗೂ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಬೃಹತ್ ದಂಧೆ ಭೇದಿಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ