Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ
Leopard : 'ಚಿನ್ನೀ ಬಾ ಇಲ್ಲಿ,’ ಎಂದಾಕ್ಷಣವೇ ಓಡಿ ಬರುವ ಚಿನ್ನು ಮತ್ತದರ ಒಡನಾಡಿಗಳು ಸಾವಿತ್ರಮ್ಮನಿಂದ ಮುದ್ದು ಮಾಡಿಸಿಕೊಂಡು ಅವರಿಗೆ ಅಕ್ಕರೆ ತೋರಿಸುವ ನೋಟ ನಿಮ್ಮ ಎದೆಯನ್ನು ತುಂಬಿ ಕಣ್ಣುಗಳನ್ನು ಮಂಜು ಮಾಡದಿರದು.
Viral: ಆಸ್ಕರ್ ಪ್ರಶಸ್ತಿ ಪಡೆದ The Elephant Whisperers ನ ಬೆಳ್ಳಿಯಂಥವರೊಬ್ಬರು ನಮ್ಮ ಬೆಂಗಳೂರಿನಲ್ಲೂ ಇದ್ದಾರೆ. ಅವರೇ ಚಿರತೆತಾಯಿ ಸಾವಿತ್ರಮ್ಮ. ಗಂಡನ ಸಾವಿನ ನಂತರ ಸಾವಿತ್ರಮ್ಮನವರಿಗೆ 2002ರಲ್ಲಿ ಅನುಕಂಪದ ಆಧಾರದ ಮೇಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೆಲಸ ಸಿಕ್ಕಿತು. ಆಕಸ್ಮಿಕವಾಗಿ ಸಿಕ್ಕ ಈ ಅವಕಾಶ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಅಲ್ಲಿಯ ಆಸ್ಪತ್ರೆಯಲ್ಲಿ ತಾಯಿಯನ್ನು ಕಳೆದುಕೊಂಡ ಅಥವಾ ರೋಗಗ್ರಸ್ಥ ಹಸುಳೆಗಳನ್ನು ನೋಡಿಕೊಳ್ಳುವ ಕೆಲಸದಲ್ಲಿ ಅವರು ಸಂಪೂರ್ಣ ತೊಡಗಿಕೊಂಡರು. ಅವರ ಈ ಅಂತಃಕರಣದ ಪಯಣದ ಬಗ್ಗೆ ‘ಡೆಕ್ಕನ್ ಹೆರಾಲ್ಡ್’ (Deccan Herald) ವರದಿ ಮಾಡಿದ್ದು ಟ್ವೀಟಿಗರನ್ನು ಇದು ವಿಸ್ಮಯಗೊಳಿಸುತ್ತಿದೆ.
Savitriamma, came to #Bannerghatta Biological Park by accident when she was offered the job in 2002 on compassionate grounds after her husband passed away. She soon became a motherly figure for many animals. Watch the story of #BannerghattaBiologicalPark’s own animal whisperer. pic.twitter.com/CkK19q4pAP
ಇದನ್ನೂ ಓದಿ— Deccan Herald (@DeccanHerald) June 4, 2023
ಈ ವಿಡಿಯೋದಲ್ಲಿ ಸಾವಿತ್ರಮ್ಮ ಚಿರತೆಯ ಮರಿಯೊಂದನ್ನು ಸ್ವಂತ ಮಗುವಿನಂತೆ ಎತ್ತಿಕೊಂಡು ಮುದ್ದಿಸುವುದನ್ನು ನೋಡಿ. ಇನ್ನೂ ಕಣ್ಣೂ ಬಿಡದ ಚಿರತೆ ಕಂದಮ್ಮಗಳಿಗೆ ಬಟ್ಟಲಿನಲ್ಲಿ ಹಾಲೂಡಿಸಿ ಅವುಗಳನ್ನು ‘ಚಿನ್ನೂ ಬಂಗಾರಾ…’ ಎಂದು ಮುದ್ದುಗರೆದು ಮಾತಾಡಿಸುವ ಪರಿಯನ್ನು ಕೇಳಿ; ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಅವೂ ಮಕ್ಕಳಿದ್ದಂತೆ. ಮುದ್ದಿನಿಂದ ಮಾತಾಡಿಸಿದರಷ್ಟೇ ಸರಿಯಾಗಿ ಉಣ್ಣುತ್ತವೆ, ಕಕ್ಕ ಮಾಡುತ್ತವೆ,’ ಎನ್ನುವ ಅಪಾರ ಜೀವನಪ್ರೀತಿಯ ಮುಗ್ಧ ಹೆಣ್ಣುಮಗಳು ಸಾವಿತ್ರಮ್ಮ ಬನ್ನೇರುಘಟ್ಟದ ಕಾಡುಪ್ರಾಣಿಗಳಿಗೆ ತಾಯಿಯೇ ಆಗಿದ್ದಾರೆ.
ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್ ಎಲ್ಲಿ ಹೋಗೋಣ?
ಚಿರತೆಗಳಂಥ ಕ್ರೂರಪ್ರಾಣಿಗಳ ಬೋನಿನಲ್ಲಿ ನಿರುಮ್ಮಳವಾಗಿ ಒಳಹೋಗುವ, ಅವರ ಬರುವನ್ನೇ ಕಾಯುತ್ತಿರುವ ಚಿರತೆಗಳು ಅಕ್ಕರೆಯಿಂದ ಅವರ ಮೈಯಡರುತ್ತವೆ. ಈ ದೃಶ್ಯಾವಳಿಯನ್ನು ನೋಡಿದ ನೆಟ್ಮಂದಿಯೆಲ್ಲ ಸಹಜವಾಗಿ ಬೆರಗಾಗಿದ್ದಾರೆ, ಭಾವುಕರಾಗಿದ್ದರೆ. ‘ಇಂಥ ಹೃದಯಸ್ಪರ್ಶೀ ಸುದ್ದಿ ಕೊಟ್ಟದ್ದಕ್ಕೆ ವಂದನೆಗಳು. ಇದು ನಮ್ಮಲ್ಲಿ ಭರವಸೆ ಮೂಡಿಸುತ್ತದೆ,’ ‘ಎಂಥಾ ಸೊಗಸಿದು! ಸಾವಿತ್ರಮ್ಮ ಅಸಾಧಾರಣ ಮನುಷ್ಯಳು,’ ಎಂದು ಮೊದಲಾಗಿ ಉದ್ಗರಿಸಿದ್ದಾರೆ.
ಇದನ್ನೂ ಓದಿ : Viral: ಇಂಥ ಟ್ವೀಟ್‌ಗೂ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿದ್ದಾರೆ
‘ಅವರು ಸಹಾನುಭೂತಿ ಹಾಗೂ ಪ್ರೀತಿಯಿಂದ ಪ್ರಾಣಿಗಳ ಕಾಳಜಿ ಮಾಡುವುದು ಸ್ಪಷ್ಟ. ಆದರೆ ಅವರು ಹೇಳುವ ಕೆಲವು ವಿಧಾನಗಳು ವೈಜ್ಞಾನಿಕವಾಗಿ ಅಸಮರ್ಪಕ ಮತ್ತು ಅವುಗಳು ಚಿರತೆಗಳಿಗೆ ಜೀವಕ್ಕೆ ಮಾರಕವಾಗಬಹುದು,’ ಎಂದೊಬ್ಬರು ಸಣ್ಣ ತಕರಾರು ತೆಗೆದಿದ್ದಾರೆ. ಆದರೆ ಇದನ್ನು ನೋಡಿದ ಹೆಚ್ಚೂಕಡಿಮೆ ಎಲ್ಲರಿಗೂ ಸಾವಿತ್ರಮ್ಮನಿಗೆ ಕೈಮುಗಿಯುವುದು ಬಿಟ್ಟು ಬೇರೇನೂ ಮಾತು ಹೊರಡುತ್ತಿಲ್ಲ.
ನಿಮ್ಮ ಊರುಗಳಲ್ಲಿಯೂ ಇಂಥ ವಾತ್ಸಲ್ಯಮಯಿಗಳಿರುತ್ತಾರೆ, ಗಮನಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:49 am, Tue, 6 June 23