ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಗೋಲ್ಡ್ ಸ್ಮಗ್ಲಿಂಗ್: ಪಾದದ ಕೆಳಗೆ ಚಿನ್ನದ ಬಾರ್ ಕಟ್ಟುಕೊಂಡು ಸಾಗಿಸುತ್ತಿದ್ದ ಚೆನ್ನೈ ಗ್ಯಾಂಗ್ ಬಂಧನ!

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ತಮ್ಮ ಪಾದಗಳ ಅಡಿಯಲ್ಲಿ ಕಪ್ಪು ಟೇಪ್‌ನಿಂದ ಬಚ್ಚಿಟ್ಟಿದ್ದ 1.6 ಕೆಜಿ ತೂಕದ 28 ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 2.6 ಕೋಟಿ ರೂಪಾಯಿ ಆಗಿದೆ. ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಗೋಲ್ಡ್ ಸ್ಮಗ್ಲಿಂಗ್: ಪಾದದ ಕೆಳಗೆ ಚಿನ್ನದ ಬಾರ್ ಕಟ್ಟುಕೊಂಡು ಸಾಗಿಸುತ್ತಿದ್ದ ಚೆನ್ನೈ ಗ್ಯಾಂಗ್ ಬಂಧನ!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Oct 14, 2026 | 1:34 PM

ಮುಖ್ಯಾಂಶಗಳು

  • ಪಾದದಡಿಯಲ್ಲಿ 28 ಚಿನ್ನದ ಬಾರ್‌ಗಳನ್ನು ಅಕ್ರಮವಾಗಿ ಬಚ್ಚಿಟ್ಟಿದ್ದ ನಾಲ್ವರ ಬಂಧನ.
  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.6 ಕೋಟಿ ಮೌಲ್ಯದ ಬಂಗಾರ ವಶ.
  • ದುಬೈನಿಂದ ಚೆನ್ನೈಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಜಾಲ

ದೇವನಹಳ್ಳಿ, ಅಕ್ಟೋಬರ್ 14: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಆರೋಪಿಗಳು ತಮ್ಮ ಪಾದಗಳ ಅಡಿಯಲ್ಲಿ ಹಾಗೂ ಪಾದದ ಅಕ್ಕಪಕ್ಕದಲ್ಲಿ ಚಿನ್ನದ ಬಾರ್‌ಗಳನ್ನು ಕಪ್ಪು ಟೇಪ್ ಬಳಸಿ ಗಟ್ಟಿಯಾಗಿ ಕಟ್ಟುಕೊಂಡು ವಿಮಾನ ನಿಲ್ದಾಣದಿಂದ ಹೊರಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ದುಬೈನಿಂದ ಬಂದಿದ್ದ ಗ್ಯಾಂಗ್

ಚೆನ್ನೈನ ವ್ಯಾಸರ್ಪಾಡಿ ಮೂಲದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದಂತೆ ಒಟ್ಟು ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಮತ್ತು ಅಶಾರುದ್ದೀನ್ ಚೆಲ್ಲದುರೈ ಎಂದು ಗುರುತಿಸಲಾಗಿದೆ. ಇವರಲ್ಲಿ ನಸ್ರಿನ್ ಹಾಗೂ ಹೈರುನ್ ಸಹೋದರಿಯರಾಗಿದ್ದು, ಉಳಿದವರ ಜತೆ ಸಂಬಂಧ ಹೊಂದಿದ್ದಾರೆ. ದುಬೈನಿಂದ ಆಗಮಿಸಿದ್ದ ಈ ತಂಡವು ಒಟ್ಟು 28 ಚಿನ್ನದ ಬಾರ್‌ಗಳನ್ನು (ಬಿಸ್ಕತ್ತುಗಳನ್ನು) ಕದ್ದುಮುಚ್ಚಿ ಸಾಗಿಸುತ್ತಿತ್ತು.

ಅಂದಾಜು 2.6 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ

ಕಸ್ಟಮ್ಸ್ ಅಧಿಕಾರಿಗಳ ಗುಪ್ತಚರ ಮಾಹಿತಿ ಮತ್ತು ಕರಾರುವಾಕ್ ಪ್ರೊಫೈಲಿಂಗ್ ಆಧಾರದ ಮೇಲೆ ಟರ್ಮಿನಲ್ 2ರ ನಿರ್ಗಮನ ದ್ವಾರದಲ್ಲಿ ಈ ತಂಡವನ್ನು ತಡೆದು ತೀವ್ರ ತಪಾಸಣೆ ನಡೆಸಲಾಗಿದೆ. ಈ ವೇಳೆ ಇವರು ಪಾದಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.6 ಕೆಜಿ ತೂಕದ 28 ಚಿನ್ನದ ಬಾರ್‌ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ಅಂದಾಜು 2.6 ಕೋಟಿ ರೂಪಾಯಿ ಎಂದು ಅಂದಜಿಸಲಾಗಿದೆ. ಚಿನ್ನದ ಜೊತೆಗೆ 13 ನವೀಕರಿಸಿದ ಮೊಬೈಲ್ ಫೋನ್‌ಗಳು ಮತ್ತು 8 ಲ್ಯಾಪ್‌ಟಾಪ್‌ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ತಪಾಸಣೆ ವೇಳೆ ಕೆಲ ಚಿನ್ನದ ಬಾರ್‌ಗಳು ಟ್ರಾಲಿಗಳ ಮೇಲೂ ಪತ್ತೆಯಾಗಿವೆ. ಈ ಪ್ರಕರಣದ ಕುರಿತು ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಅಕ್ರಮ ಸಾಗಣೆ ಜಾಲದ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬುದರ ಕುರಿತು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Wed, 14 October 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us