ಬೆಂಗಳೂರು: ನಿನ್ನೆ ರಾತ್ರಿ ಭಾರೀ ಮಳೆಯಾದ ಹಿನ್ನೆಲೆ, ಇಂಜಿನ್‌ಗಳಿಗೆ ನೀರು ನುಗ್ಗಿ 20ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯಲ್ಲಿ ಮಳೆಯಿಂದ ಟರ್ಮಿನಲ್ ಮುಂಭಾಗದಲ್ಲಿ 2 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಈ ವೇಳೆ ರಸ್ತೆಯಲ್ಲೇ ಹಲವು ಕಾರುಗಳು ಕೆಟ್ಟು ನಿಂತಿವೆ.
ರಾತ್ರಿ ಸುರಿದ ಮಳೆಯಿಂದಾಗಿ ಟ್ಯಾಕ್ಸಿ ಮತ್ತು ಖಾಸಗಿ ಕಾರುಗಳಿಗೆ ಹಾನಿಯಾಗಿದೆ. ಹೀಗಾಗಿ 20 ಕ್ಕೂ ಅಧಿಕ ಕಾರುಗಳು ರಿಪೇರಿಗೆ ಬಂದಿವೆ. ಸಮರ್ಪಕ ಬಾಡಿಗೆ ಸಿಗದೆ ಪರದಾಡುತ್ತಿದ್ದ ಚಾಲಕರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಸಹಜ ಸ್ಥಿತಿಗೆ ಮರಳಿದ ವಿಮಾನ ನಿಲ್ದಾಣ ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ. ರಸ್ತೆಯಲ್ಲಿ ನಿಂತಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದೆ. ರಾತ್ರಿ ಏರ್ಪೋಟ್ ಸಿಬ್ಬಂದಿ ನೀರು ಹರಿದು ಹೋಗಲು ಕಾಲುವೆ ಮಾಡಿ ನೀರು ಖಾಲಿ ಮಾಡಿದ್ದಾರೆ. ಇದೀಗ ವಾಹನ ಸವಾರರು ಸರಾಗವಾಗಿ ಏರ್ಪೋರ್ಟ್ಗೆ ತೆರಳಬಹುದು.
ಮಣ್ಣು ಕುಸಿದು ಕ್ಯಾಂಟರ್ ಪಲ್ಟಿ ಧಾರಾಕಾರ ಮಳೆಗೆ ಮಣ್ಣು ಕುಸಿದು ಕ್ಯಾಂಟರ್ ಪಲ್ಟಿಯಾಗಿದೆ. ಈ ಘಟನೆ ದೇವನಹಳ್ಳಿ ಹೊರವಲಯ ಸೂಲಿಬೆಲೆ ರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಕ್ಯಾಂಟರ್ನಲ್ಲಿದ್ದ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಮಳೆಗೆ ಕುಸಿದ ಕಾಂಪೌಂಡ್ ನಿರಂತರ ಮಳೆಯಿಂದ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಕಾಂಪೌಂಡ್ ಕುಸಿದಿದೆ. ರಸ್ತೆಗೆ ಅಡ್ಡಲಾಗಿ ಮಣ್ಣು, ಕಲ್ಲು ಕುಸಿದು ಬೀಳುವುದನ್ನು ತಡೆಯಲು ಸಪೋರ್ಟ್ಗೆ ಮಣ್ಣಿನ ಚೀಲ ಇಡಲಾಗಿದೆ. ಕಾಂಪೌಂಡ್ಗೆ ಹೊಂದಿಕೊಂಡ ಮನೆ ಕುಸಿಯುವ ಸಾಧ್ಯತೆಯಿದೆ. ಯಾವುದೇ ಸಮಯದಲ್ಲಾದರೂ ಮನೆ ಕುಸಿಯುವ ಆತಂಕ ಇದೆ. ಹೀಗಾಗಿ ನಿವಾಸಿಗಳು ಲಗೇಜ್ ಸಮೇತ ಮನೆ ಖಾಲಿ ಮಾಡಿದ್ದಾರೆ.
ಮಳೆ ಅವಾಂತರಕ್ಕೆ ವ್ಯಕ್ತಿ ಬಲಿ ಬೆಂಗಳೂರು ನಗರದಲ್ಲಿ ಮಳೆ ಅವಾಂತರಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ. ವಿದ್ಯುತ್ ಪ್ರವಹಿಸಿ ವೆಂಕಟೇಶ್(56) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ನೀರು ಮನೆಗೆ ನುಗ್ಗಿದೆ. ವೆಂಕಟೇಶ್ ಮನೆಯಲ್ಲಿದ್ದ ನೀರನ್ನು ಹೊರಹಾಕುತ್ತಿದ್ದರು. ಈ ವೇಳೆ ಸ್ವಿಚ್ ಬೋರ್ಡ್ ಮುಟ್ಟಿದ್ದ ವೆಂಕಟೇಶ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆಗೆ ಬೃಹತ್ ಗೋಡೆ ಕುಸಿತ; ಮನೆ ಕುಸಿಯುವ ಭೀತಿಯಿಂದ ಕಣ್ಣೀರಿಡುತ್ತಿರುವ ಮಹಿಳೆ
Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆ; ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು