ಗತವೈಭವ ಮರುಕಳಿಸುವ ಆನೇಕಲ್ ಕರಗಕ್ಕೆ ಆದ್ದೂರಿ ಸಿದ್ದತೆ; 9 ದಿನಗಳ ಕಾಲ ಶಾಸ್ತೋಕ್ತವಾಗಿ ನಡೆಯಲಿದೆ ಕರಗ ಉತ್ಸವ

ಅದು ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿರುವ ಕರಗ ಉತ್ಸವ. ಕರಗ ಹೊರುವ ವಿಚಾರಕ್ಕೆ ಕುಲಸ್ಥರು ಹಾಗೂ ಅರ್ಚಕರ ಎರಡು ಬಣಗಳ ನಡುವೆ ವಿವಾದ ಏರ್ಪಟ್ಟಿತ್ತು. ಇದೀಗ ಈ ಕರಗ ಹೊರಲು ಕುಲಸ್ಥರ ಪರವಾಗಿ ತಹಶೀಲ್ದಾರ್ ಆದೇಶಿಸಿದ್ದು, ಕರಗ ಉತ್ಸವಕ್ಕೆ ಆದ್ದೂರಿ ಸಿದ್ದತೆಯಾಗಿದೆ. ಗತವೈಭವ ಸಾರುವ ಇತಿಹಾಸ ಪ್ರಸಿದ್ದ ಕರಗ ಉತ್ಸವ ಕಣ್ತುಂಬಿಕೊಳ್ಳಲು ಭಕ್ತ ಸಾಗರ ಎದುರು ನೋಡುತ್ತಿದೆ. ಅಷ್ಟಕ್ಕೂ ಈ ಕರಗ ಉತ್ಸವ ನಡೆಯುತ್ತಿರೋದಾದ್ರು ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಗತವೈಭವ ಮರುಕಳಿಸುವ ಆನೇಕಲ್ ಕರಗಕ್ಕೆ ಆದ್ದೂರಿ ಸಿದ್ದತೆ; 9 ದಿನಗಳ ಕಾಲ ಶಾಸ್ತೋಕ್ತವಾಗಿ ನಡೆಯಲಿದೆ ಕರಗ ಉತ್ಸವ
ಆನೇಕಲ್​ ಕರಗ
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 9:17 PM

ಬೆಂಗಳೂರು ಗ್ರಾಮಾಂತರ, ಮೇ.22: ರಾಜ್ಯದಲ್ಲಿಯೇ ಹೆಸರುವಾಸಿಯಾದ ಬೆಂಗಳೂರು ಕರಗದಂತೆಯೇ ಆನೇಕಲ್(Anekal) ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಶ್ರೀ ದ್ರೌಪತಿ ದೇವಿ ಕರಗ(Karaga) ಮಹೋತ್ಸವವೂ ಖ್ಯಾತಿ ಗಳಿಸಿದೆ.  ಕರಗವು ವಾಡಿಕೆಯಂತೆ ಏಪ್ರಿಲ್ ತಿಂಗಳ ಚಿತ್ತ ಪೂರ್ಣಮಿಯಂದು ನಡೆಯಬೇಕಿತ್ತು. ಆದ್ರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಮತ್ತು ಕರಗ ಹೊರುವ ವಿಚಾರವಾಗಿ ಕುಲಸ್ಥರು ಹಾಗೂ ಅರ್ಚಕರ ನಡುವೆ ಗೊಂದಲ ಏರ್ಪಟ್ಟಿತ್ತು. ಈ ಹಿನ್ನೆಲೆ ಏಪ್ರಿಲ್ ತಿಂಗಳಿನಲ್ಲಿ ಕರಗ ಉತ್ಸವಕ್ಕೆ ತಾಲೂಕು ಆಡಳಿತ ಅನುಮತಿ ನೀಡಿರಲಿಲ್ಲ. ಇದೀಗ ತಾಲ್ಲೂಕು ಆಡಳಿತ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಕರಗವನ್ನ ಹೊರಲು ಕುಲಸ್ಥರ ಪರವಾಗಿ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಆದೇಶ ಹೊರಡಿಸಿದ್ದಾರೆ. ಈ ಬಾರಿಯೂ ಸಹ ಚಂದ್ರಪ್ಪ ಕರಗ ಹೊರಲಿದ್ದು, ಸಕಲ ಸಿದ್ದತೆಗಳನ್ನ ನಡೆಸಿಕೊಳ್ಳಲಾಗಿದೆ.

ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಕರಗವಿದು

ಇನ್ನು ನೂರಾರು ವರ್ಷಗಳ ಇತಿಹಾಸವುಳ್ಳ ಧಾರ್ಮಿಕ ವಿಧಿ ವಿಧಾನಗಳಿಗೆ ನಾಡಿನಲ್ಲೇ ಹೆಸರುವಾಸಿಯಾದ ಆನೇಕಲ್ ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಶ್ರೀ ದ್ರೌಪತಿ ದೇವಿ ಕರಗ ಮಹೋತ್ಸವಕ್ಕೆ ಹಲವಾರು ವೈಶಿಷ್ಟ್ಯಗಳಿದೆ. ಅನೇಕ ಕಡೆ ಕರಗ ನಡೆದರೂ ಬೇರೆಲ್ಲೂ ಕಾಣಸಿಗದ ಅಪರೂಪದ ಆಚರಣೆಗಳನ್ನು ಇಲ್ಲಿ ನೋಡಬಹುದು. ಬೇರೆಡೆ ಒಂದು ದಿನಕ್ಕೆ ಸೀಮಿತಗೊಳ್ಳುವ ಕರಗ, ಇಲ್ಲಿ ‘ಹಸಿಕರಗ’ ಹಾಗೂ ‘ಒಣಕರಗ’ ಎಂಬ ಎರಡು ಉತ್ಸವ ನಡೆಯುತ್ತದೆ. ಜೊತೆಗೆ ಅಭಿಮನ್ಯು ಪದ್ಮವ್ಯೂಹ ಭೇದಿಸುವ ಕೋಟೆ ಜಗಳ ಅತ್ಯಂತ ಹೆಸರುವಾಸಿಯಾಗಿದೆ.

ಇದನ್ನೂ ಓದಿ:ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಸಂಪನ್ನ, ಫೋಟೋಸ್​ ಇಲ್ಲಿವೆ

ಮೇ.23 ರಿಂದ ಕರಗ ಆರಂಭ

23 ನೇ ತಾರೀಖು ಹಸಿಕರಗ, 26ನೇ ತಾರೀಖು ಒಣಕರಗ ಜೊತೆಗೆ ಅತ್ಯಂತ ಹೆಸರುವಾಸಿಯಾದ ಅಭಿಮನ್ಯು ಪದ್ಮವ್ಯೂಹ ಭೇದಿಸುವ ಕೋಟೆ ಜಗಳ 25 ನೇ ತಾರೀಖಿನಂದು ಹಮ್ಮಿಕೊಳ್ಳಲಾಗಿದೆ. ಕರಗ ಮಹೋತ್ಸವ ಹಿನ್ನೆಲೆ ಆನೇಕಲ್​ನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ದೇವಸ್ಥಾನ ಸೇರಿದಂತೆ ಪ್ರಮುಖ ರಾಜಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ದೇವಾಲಯದ ಮುಂಭಾಗದ ಆವರಣದಲ್ಲಿ ಕೆರೆಯ ಮಣ್ಣಿನಿಂದ ಬಲರಾಮ ಮೂರ್ತಿ ಮಾಡಲಾಗುತ್ತಿದ್ದು, ವಿವಿಧ ಪೂಜಾ ಧಾರ್ಮಿಕ ಕಾರ್ಯಕ್ರಮಗಳನ್ನ ಆದ್ದೂರಿಯಾಗಿ ನಡೆಸಲಾಗುತ್ತಿದೆ.

ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗವನ್ನು ಹೋಲುವ ಆನೇಕಲ್ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ದ್ರೌಪದಮ್ಮ ದೇವಿ ಕರಗ ಉತ್ಸವಕ್ಕೆ ಇನ್ನೊಂದೆ ದಿನ ಬಾಕಿ ಇದ್ದು, ಗತವೈಭವದ ಕರಗ ಮಹೋತ್ಸವಕ್ಕೆ ಆನೇಕಲ್ ತಾಲ್ಲೂಕಿನಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ