ನೆಲಮಂಗಲ: ವಿವಾಹಿತೆಯ ಬ್ಲಾಕ್‌ಮೇಲ್‌ಗೆ ಜಿಮ್ ಟ್ರೈನರ್ ಬಲಿ? ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಬಾಡಿ ಬಿಲ್ಡರ್!

ನೆಲಮಂಗಲದಲ್ಲಿ ಜಿಮ್ ಟ್ರೈನರ್ ದಿಲೀಪ್, ವಿವಾಹಿತ ಮಹಿಳೆ ಯೋಗಿತಾ ಎಂಬುವವರ ಬ್ಲಾಕ್‌ಮೇಲ್‌ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ ವಿಡಿಯೋ ಕಾಲ್ ಮಾಡುತ್ತಲೇ ಯುವಕ ನೇಣಿಗೆ ಶರಣಾಗಿದ್ದಾರೆ. ಮತ್ತೊಂದೆಡೆ, ಆಸ್ತಿಗಾಗಿ ಟಾರ್ಚರ್ ನೀಡುತ್ತಿದ್ದ ಕಾರಣ ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.

ನೆಲಮಂಗಲ: ವಿವಾಹಿತೆಯ ಬ್ಲಾಕ್‌ಮೇಲ್‌ಗೆ ಜಿಮ್ ಟ್ರೈನರ್ ಬಲಿ? ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಬಾಡಿ ಬಿಲ್ಡರ್!
ಜಿಮ್ ಟ್ರೈನರ್ ದಿಲೀಪ್
Image Credit source: tv9

Updated on: Apr 13, 2026 | 7:51 AM

ನೆಲಮಂಗಲ, ಏಪ್ರಿಲ್ 13: ಜಿಮ್‌ಗೆ ಬರುತ್ತಿದ್ದ ವಿವಾಹಿತ ಮಹಿಳೆಯೊಬ್ಬರ ಬ್ಲಾಕ್‌ಮೇಲ್ ಹಾಗೂ ಕಿರುಕುಳ ತಾಳಲಾರದೆ ಯುವ ಬಾಡಿ ಬಿಲ್ಡರ್ ದಿಲೀಪ್ (28) ಎಂಬುವವರು ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಸಾವಿನ ನಿರ್ಧಾರವನ್ನು ತಿಳಿಸಿರುವುದು ಪ್ರಕರಣದ ಬಗ್ಗೆ ಹಲವು ಅನುಮಾನ ಮೂಡಿಸಿದೆ. ಇದರೊಂದಿಗೆ, ಇಬ್ಬರು ಮಕ್ಕಳ ತಾಯಿ ಜತೆ ಸಹವಾಸ ಮಾಡಿದ ತಪ್ಪಿಗೆ ಜಿಮ್ ಟ್ರೈನರ್ ಬಲಿಯಾದಂತಾಗಿದೆ.

ಜಿಮ್‌ನಲ್ಲಿ ಪರಿಚಯ, ಸಂಬಂಧ!

ನೆಲಮಂಗಲ ತಾಲೂಕಿನ ವಾಜರಹಳ್ಳಿಯ ನಿವಾಸಿಯಾಗಿದ್ದ ದಿಲೀಪ್ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದರು. ಇವರು ಕೆಲಸ ಮಾಡುತ್ತಿದ್ದ ಜಿಮ್‌ಗೆ ಫಿಟ್ನೆಸ್‌ಗಾಗಿ ಬರುತ್ತಿದ್ದ ಯೋಗಿತಾ ಎಂಬ ಮಹಿಳೆಯ ಪರಿಚಯವಾಗಿತ್ತು. ಈ ಪರಿಚಯ ಸಲುಗೆಗೆ ತಿರುಗಿ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಒಂದು ವರ್ಷದ ಹಿಂದೆಯೇ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ಸುಖಾಂತ್ಯಗೊಂಡಿತ್ತು. ಆದರೂ ಕೂಡ ಯೋಗಿತಾ, ದಿಲೀಪ್ ಬೆನ್ನು ಬಿಡದೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

ಮನೆ ಬರೆದುಕೊಡುವಂತೆ ಟಾರ್ಚರ್?

ಮೃತ ದಿಲೀಪ್ ತಂದೆ ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ‘ಯೋಗಿತಾ ನನ್ನ ಮಗನಿಗೆ ವಿಪರೀತ ಚಿತ್ರಹಿಂಸೆ ನೀಡುತ್ತಿದ್ದಳು. ದಿಲೀಪ್ ಹೆಸರಿನಲ್ಲಿದ್ದ ಮನೆಯನ್ನು ತನ್ನ ಮಗನ ಹೆಸರಿಗೆ ಬರೆದುಕೊಡುವಂತೆ ಟಾರ್ಚರ್ ನೀಡುತ್ತಿದ್ದಳು. ಇದರಿಂದ ಮನನೊಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅವರು ದೂರಿದ್ದಾರೆ.

ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ

ದಿಲೀಪ್ ನೇಣಿಗೆ ಶರಣಾಗುವ ಮುನ್ನ ಯೋಗಿತಾಳಿಗೆ ವಿಡಿಯೋ ಕಾಲ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಯೋಗಿತಾ, ದಿಲೀಪ್ ಸಹೋದರಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಷಯ ತಿಳಿಸಿದ್ದಾಳೆ. ತಕ್ಷಣ ಕುಟುಂಬಸ್ಥರು ರೂಮಿನ ಬಾಗಿಲು ಮುರಿದು ನೋಡಿದಾಗ ದಿಲೀಪ್ ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿದ್ದರು. ತಕ್ಷಣ ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಿಲೀಪ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us