
ದೇವನಹಳ್ಳಿ, ಅಕ್ಟೋಬರ್ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಏರ್ಲೈನ್ಸ್ನ 3 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದ್ದು, 473 ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ಬೋರ್ಡಿಂಗ್ ಪಾಸ್ ಸಹ ನೀಡದೆ, ಸಮರ್ಪಕ ಮಾಹಿತಿಯೂ ನೀಡದೆ ಗಂಟೆಗಟ್ಟಲೇ ಕಾಯಿಸಿದ್ದಾರೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನಗಳು ಭಾರೀ ವಿಳಂಬವಾಗಿದೆ. ಇನ್ನು ತಾಂತ್ರಿಕ ಸಮಸ್ಯೆಯಿಂದ ಬೋರ್ಡಿಂಗ್ ಪಾಸ್ ಕೂಡ ನೀಡಿಲ್ಲ. ಹೀಗಾಗಿ ನಿನ್ನೆ ರಾತ್ರಿಯಿಂದ ಕೆಂಪೇಗೌಡ ಏರ್ಪೋರ್ಟ್ನಲ್ಲೇ ಪ್ರಯಾಣಿಕರು ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ಸುರಕ್ಷಿತವಾಗಿ ಲ್ಯಾಂಡ್, ತಪ್ಪಿದ ಅನಾಹುತ
ಕೋಲ್ಕತ್ತಾ ಮತ್ತು ಮುಂಬೈಗೆ ಮೂರು ದೇಶೀಯ ವಿಮಾನಗಳು ತೆರಳಬೇಕಿತ್ತು. ಆದರೆ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ನಿಗದಿತ ಸಮಯಕ್ಕಿಂತ ಮೂರು ಗಂಟೆಗೂ ಹೆಚ್ಚು ವಿಳಂಬ ಉಂಟಾಗಿದ್ದು, ಮೂರು ಹಸುಗೂಸು ಸೇರಿದಂತೆ ಒಟ್ಟು 473 ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
SG-158 ಬೆಂಗಳೂರಿನಿಂದ ಕೋಲ್ಕತ್ತಾ: ಅಕ್ಟೋಬರ್ 21 ರಂದು ಸಂಜೆ 06:30ಕ್ಕೆ ಹೊರಡಬೇಕಿದ್ದ ಈ ವಿಮಾನದಲ್ಲಿ ಒಟ್ಟು 134 ಪ್ರಯಾಣಿಕರು ಪ್ರಯಾಣಿಸಬೇಕಿತ್ತು. ನಿಗದಿತ ಸಮಯಕ್ಕಿಂತ ಮೂರು ಗಂಟೆಗಳಿಗೂ ಹೆಚ್ಚು ವಿಳಂಬವಾಗಿದ್ದು, ಅಂದಾಜು ರಾತ್ರಿ 09:45ಕ್ಕೆ ವಿಮಾನ ಸಂಚಾರಕ್ಕೆ ಸಮಯ ನಿಗದಿಪಡಿಸಲಾಗಿದೆ.
SG-647 ಬೆಂಗಳೂರಿನಿಂದ ಕೋಲ್ಕತ್ತಾ: ಒಂದು ಮಗು ಸೇರಿದಂತೆ 161 ಪ್ರಯಾಣಿಕರು ಈ ವಿಮಾನದ ಮೂಲಕ ಸಂಜೆ 07:45 ಗಂಟೆಗೆ ಹೊರಡಬೇಕಿತ್ತು. ಆದರೆ ಅಕ್ಟೋಬರ್ 21 ರಂದು ರಾತ್ರಿ ಅಂದಾಜು 10:20 ಗಂಟೆಗೆ ವಿಮಾನ ಟೇಕಾಪ್ಗೆ ಸಮಯ ನಿಗದಿಪಡಿಸಲಾಗಿದೆ. ಇದರಿಂದಾಗಿ ವಿಮಾನವು ಎರಡೂವರೆ ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದೆ.
SG-633 ಬೆಂಗಳೂರಿನಿಂದ ಮುಂಬೈ: ಈ ಫ್ಲೈಟ್ ಅಕ್ಟೋಬರ್ 21 ರಂದು ರಾತ್ರಿ 11:45 ಗಂಟೆಗೆ ಕೆಂಪೇಗೌಡ ಏರ್ಪೋರ್ಟ್ನಿಂದ ಹೊರಡಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ ಅಂತಾ ಅಕ್ಟೋಬರ್ 22 ರ ಬೆಳಗಿನ ಜಾವ 02:15 ಗಂಟೆಗೆ ಸಂಚಾರಕ್ಕೆ ಸಮಯ ನಿಗದಿಪಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತಡರಾತ್ರಿ ಎರಡೂವರೆ ಗಂಟೆಗಳ ಕಾಲ ಕೆಐಎಬಿನಲ್ಲಿ ಪರದಾಡಿದರು.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ದಸರಾ ಸಂಭ್ರಮ: ರಂಗು ರಂಗಿನ ರಂಗೋಲಿಗೆ ಪ್ರಯಾಣಿಕರು ಫಿದಾ
ಇನ್ನು ಈ ಸಮಸ್ಯೆಗೆ ನಿರ್ದಿಷ್ಟ ಕಾರಣವಾದರೂ ಏನು ಎಂದು ಸ್ಪೈಸ್ ಜೆಟ್ ಏರ್ಲೈನ್ಸ್ ಸಂಸ್ಥೆಯು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಕೂಡ ನೂರಾರು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.