ವೈದ್ಯರ ನಿರ್ಲಕ್ಷ್ಯಕ್ಕೆ ಶಾಶ್ವತವಾಗಿ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿ ಯುವಕ: ಆಗಿದ್ದೇನು?

ನೆಲಮಂಗಲದ ವಿಪಿ ಮಾಗ್ನಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಯುವಕ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾನೆ. ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದ ಕಾರಣ, ಕಾಲಿನ ನರದಲ್ಲಿ ರಕ್ತ ಹೆಪ್ಪುಗಟ್ಟಿದೆ. ಆಪರೇಷನ್ ಅಗತ್ಯವಿದ್ದರೂ ನಿರ್ಲಕ್ಷಿಸಿದ ವೈದ್ಯರ ವಿರುದ್ಧ ಪೋಷಕರು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯಕ್ಕೆ ಶಾಶ್ವತವಾಗಿ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿ ಯುವಕ: ಆಗಿದ್ದೇನು?
ಯಶವಂತ್
Image Credit source: tv9 kannada

Updated on: Jun 26, 2026 | 3:59 PM

ಮುಖ್ಯಾಂಶಗಳು

  • ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿ ವಿದ್ಯಾರ್ಥಿ
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು
  • ಕಾನೂನು ಮೂಲಕ ಉತ್ತರ ಕೊಡುತ್ತೇವೆ ಎಂದ ವೈದ್ಯರು

ನೆಲಮಂಗಲ, ಜೂನ್​​​ 26: ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ವೈದ್ಯರನ್ನ ಸಾಕ್ಷಾತ್​​ ದೇವರೆಂದು ಭಾವಿಸಲಾಗುತ್ತದೆ. ಹೀಗಿರುವಾಗ ವೈದ್ಯರು (Doctors) ಕೊಂಚ ಯಾಮಾರಿದರೂ ರೋಗಿಗಳ ಜೀವಕ್ಕೆ ಕುತ್ತು ಬರುವುದು ಗ್ಯಾರಂಟಿ. ಸದ್ಯ ಇಂತಹದೊಂದು ಒಂದು ಘಟನೆ ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ 21 ವರ್ಷದ ಯುವಕ ಯಶವಂತ್ ಕಾಲು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ನಡೆದಿದ್ದೇನು?

ನೆಲಮಂಗಲ ತಾಲೂಕಿನ ಹುಲುಕುಂಟೆ ನಿವಾಸಿ ಯಶವಂತ್, ಮೊದಲ ವರ್ಷದ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದಾನೆ. ಯಶವಂತ್​ಗೆ ತಂದೆ ಇಲ್ಲ. ಹೀಗಾಗಿ ಕುಟುಂಬದ ಜವಾಬ್ದಾರಿ ಈತನ ಮೇಲಿದೆ. ಹೀಗಾಗಿ ಬೆಳಿಗ್ಗೆ ಕಾಲೇಜು, ರಾತ್ರಿ ವೇಳೆ ಕೆಲಸಕ್ಕೆ ತೆರಳುತ್ತಿದ್ದ. ಕಳೆದ ಭಾನುವಾರ ಹುಲುಕೊಂಟೆ ಬಳಿ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿತ್ತು. ಈ ವೇಳೆ ಆತನ ಬಲಗಾಲಿನ ಮಂಡಿ ಚಿಪ್ಪಿಗೆ ಪೆಟ್ಟು ಬಿದ್ದಿತ್ತು.

ಇದನ್ನೂ ಓದಿ: ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ: ದಾರುಣ ಅಂತ್ಯ ಕಂಡ ಯುವಕ

ಈ ವೇಳೆ ಕುಟುಂಬಸ್ಥರು ನೆಲಮಂಗಲ ಟೌನಲ್ಲಿರುವ ವಿಪಿ ಮಾಗ್ನಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಆಪರೇಷನ್ ಮಾಡಬೇಕು, ಒಂದುವರೆ ಲಕ್ಷ ರೂ ಖರ್ಚಾಗತ್ತೆ ಎಂದಿದ್ದಾರೆ. ಕೆಲ ಸಮಯ ಬಿಟ್ಟು ಸದ್ಯಕ್ಕೆ ಆಪರೇಷನ್ ಮಾಡುವ ಅಗತ್ಯವಿಲ್ಲ ಎಂದು ಡ್ರೆಸ್ಸಿಂಗ್ ಮಾಡಿ ಕಳುಹಿಸಿದ್ದಾರೆ.

ಕಾಲು ತೆಗೆಯಬೇಕು ಎಂದ ವೈದ್ಯರು

ಕಾಲು ನೋವು ತಾಳತಾರದೆ ಯಶವಂತ್ ಪರದಾಡಿದ್ದಾನೆ. ಕೂಡಲೆ ಹಾಸ್ಮಾಟ್, ಬಿಜಿಎಸ್, ಪೀಪಲ್ ಟ್ರೀ ಆಸ್ಪತ್ರೆ ಅಲೆದಾಡಿದ್ದಾನೆ. 8 ಗಂಟೆಗಳಲ್ಲಿ ಸರ್ಜರಿ ಮಾಡಬೇಕಿತ್ತು. ಈಗ ಕಾಲಿನ ನರದಲ್ಲಿ ರಕ್ತ ಹೆಪ್ಪು ಕಟ್ಟಿದೆ. ಇದೀಗ ಕಾಲು ತೆಗೆಯುವ ಪರಿಸ್ಥಿತಿ ಬಂದರೂ ಬರಬಹುದು ಎಂದಿದ್ದಾರೆ ವೈದ್ಯರು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ನೆಲಮಂಗಲ ಟೌನ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜಾಜಿನಗರದಲ್ಲಿ ಅವಘಡ: ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ

ವಿಪಿ ಮಾಗ್ನಸ್ ಆಸ್ಪತ್ರೆಯವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಕಾನೂನು ಮೂಲಕ ನಾವು ಉತ್ತರ ಕೊಡುತ್ತೇವೆ ಎಂದಿದ್ದಾರೆ. ಸದ್ಯ ನೆಲಮಂಗಲ ಟೌನ್ ಪೊಲೀಸರು ದೂರು ಪಡೆದಿದ್ದು, ಸಂಬಂಧಪಟ್ಟ ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಕ್ರಮಕೈಗೊಳ್ಳಲಿದ್ದಾರೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us