ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ

Bengaluru university to be renamed as Dr Manmohan Singh University: ಬೆಂಗಳೂರು ಯೂನಿವರ್ಸಿಟಿಯ ಹೆಸರನ್ನು ಬದಲಾಯಿಸಲಾಗುತ್ತಿದೆ. ಜ್ಞಾನಭಾರತಿ ಕ್ಯಾಂಪಸ್​ನಲ್ಲಿರುವ ಬೆಂಗಳೂರು ಯೂನಿವರ್ಸಿಟಿಗೆ ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ತಮ್ಮ 16ನೇ ಬಜೆಟ್​​ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಭಾರತದ ಆಧುನಿಕ ಆರ್ಥಿಕ ನೀತಿಗಳ ಹರಿಕಾರರೆಂದು ಹೆಸರಾಗಿದ್ದರು. ಅವರ ಸಾಧನೆಗಳ ಅಧ್ಯಯನ ಮಾಡಲು ಬೆಂಗಳೂರು ವಿವಿಯಲ್ಲಿ ರಿಸರ್ಚ್ ಸೆಂಟರ್ ತೆರೆಯುತ್ತಿರುವುದಾಗಿ ಡಿಕೆಶಿ ಇತ್ತೀಚೆಗೆ ಹೇಳಿದ್ದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ
ಡಾ| ಮನಮೋಹನ್ ಸಿಂಗ್

Updated on: Mar 07, 2025 | 12:15 PM

ಬೆಂಗಳೂರು, ಮಾರ್ಚ್ 7: ಜ್ಞಾನಭಾರತಿ ಕ್ಯಾಂಪಸ್​ನಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ (Bengaluru university) ಹೆಸರನ್ನು ಬದಲಾಯಿಸಲಾಗುತ್ತಿದೆ. ಮಾಜಿ ಪ್ರಧಾನಿ, ದಿವಂಗತ ಡಾ| ಮನಮೋಹನ್ ಸಿಂಗ್ (Dr Manmohan Singh) ಅವರ ಹೆಸರನ್ನು ಬೆಂಗಳೂರು ವಿವಿಗೆ ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್​​ನಲ್ಲಿ ತಿಳಿಸಿದ್ದಾರೆ. ಬೆಂಗಳೂರು ವಿವಿ ಹೆಸರು ಬದಲಾವಣೆ, ಬಜೆಟ್​ನ ಅನಿರೀಕ್ಷಿತ ಘೋಷಣೆಗಳಲ್ಲಿ ಒಂದು. ಎರಡು ಅವಧಿಗೆ ಒಟ್ಟು ಹತ್ತು ವರ್ಷ ಕಾಲ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ 2024ರ ಡಿಸೆಂಬರ್ ತಿಂಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಭಾರತದ ಆಧುನಿಕ ಆರ್ಥಿಕತೆಯ ರೂವಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ಮನಮೋಹನ್ ಸಿಂಗ್ ಅವರ ಗೌರವ ಸೂಚಕವಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.

1991ರಲ್ಲಿ ಭಾರತದಲ್ಲಿ ಉದಾರೀಕರಣ ಆರ್ಥಿಕ ನೀತಿ ಜಾರಿಗೆ ತರಲಾಯಿತು. ಆಗ ಜಾಗತೀಕರಣಕ್ಕೆ ಭಾರತ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಅಂದು ಪ್ರಧಾನಿಯಾಗಿದ್ದವರು ಪಿ.ವಿ. ನರಸಿಂಹರಾವ್. ಆ ಸರ್ಕಾರದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರು. ಈ ಉದಾರೀಕರಣ ನೀತಿಯ ರೂವಾರಿ ಮನಮೋಹನ್ ಸಿಂಗ್ ಅವರೇ ಆಗಿದ್ದರು. 2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿಯೂ ಆಗಿದ್ದರು.

ಇದನ್ನೂ ಓದಿ: Akka Cafe: ಕರ್ನಾಟಕ ಬಜೆಟ್: ಅಕ್ಕ ಕ್ಯಾಂಟೀನ್, ಅಕ್ಕ ಸಹಕಾರಿ ಸಂಘಗಳ ಸ್ಥಾಪನೆ

ಅವರು ಹಣಕಾಸು ಸಚಿವರಾಗಿ ಮತ್ತು ಪ್ರಧಾನಿಯಾಗಿ ಮಾಡಲಾಗಿದ್ದ ಸಾಧನೆಗಳು, ದೇಶದ ಅರ್ಥ ವ್ಯವಸ್ಥೆಯ ಸುಧಾರಣೆಗೆ ತೆಗೆದುಕೊಂಡ ಕ್ರಮಗಳು, ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡಿ ಗುರುತಿಸಲೆಂದು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಡಿಸೆಂಬರ್​​ನಲ್ಲಿ ಘೋಷಿಸಿದ್ದರು. ಇದೀಗ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರನ್ನೇ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ ಮುಖ್ಯಾಂಶಗಳು

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ