AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಜಲ ಮಂಡಳಿಗೆ ಗಿನ್ನಿಸ್ ಗರಿಮೆ: ಬಿಡಬ್ಲ್ಯೂಎಸ್ಎಸ್ಬಿಯ ಪ್ರಯತ್ನ ಶ್ಲಾಘಿಸಿದ ಡಿಕೆ ಶಿವಕುಮಾರ್

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನೀರಿನ ಸಂರಕ್ಷಣೆಗಾಗಿ ನಡೆಸಿದ್ದ ‘ಜಲವೇ ಜೀವ’ ಅಭಿಯಾನಕ್ಕಾಗಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ. ತನ್ನಿಮಿತ್ತ ಆಯೋಜಿಸಿದ್ದ ಜಲಸಂರಕ್ಷಣೆಯಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗಿನ್ನಿಸ್ ತಂಡದಿಂದ ಗಿನ್ನಿಸ್ ವಿಶ್ವದಾಖಲೆ ಅಧಿಕೃತ ಪ್ರಮಾಣಪತ್ರವನ್ನು ಡಿಸಿಎಂ ಡಿಕೆ ಶಿವಕುಮಾರ್​ ಸ್ವೀಕರಿಸಿದ್ದಾರೆ.

ಬೆಂಗಳೂರು ಜಲ ಮಂಡಳಿಗೆ ಗಿನ್ನಿಸ್ ಗರಿಮೆ: ಬಿಡಬ್ಲ್ಯೂಎಸ್ಎಸ್ಬಿಯ ಪ್ರಯತ್ನ ಶ್ಲಾಘಿಸಿದ ಡಿಕೆ ಶಿವಕುಮಾರ್
ಗಿನ್ನಿಸ್ ವಿಶ್ವದಾಖಲೆ ಅಧಿಕೃತ ಪ್ರಮಾಣಪತ್ರ ಸ್ವೀಕರಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಗಂಗಾಧರ​ ಬ. ಸಾಬೋಜಿ
|

Updated on: Jun 19, 2025 | 10:31 AM

Share

ಬೆಂಗಳೂರು, ಜೂನ್​ 19: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)    ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಜಲ ಸಂರಕ್ಷಣಾ ಜಾಗೃತಿ ಅಭಿಯಾನಕ್ಕೆ ಗಿನ್ನಿಸ್ ವಿಶ್ವದಾಖಲೆ (Guinness World Records) ಮಾನ್ಯತೆ ದೊರೆತಿದೆ. ಆ ಮೂಲಕ ಜಲ ಸಂರಕ್ಷಣೆಗಾಗಿ ವಿಶ್ವದಲ್ಲೇ ಅತಿದೊಡ್ಡ ಪ್ರತಿಜ್ಞೆ ಮಾಡಿದ ಹೆಗ್ಗಳಿಕೆ ಬಿಡಬ್ಲ್ಯೂಎಸ್ಎಸ್​ಬಿ ಪಾತ್ರವಾಗಿದೆ. ಮಾರ್ಚ್ 21 ರಿಂದ 28 ರವರೆಗೆ ನಡೆದ ಜಲ ಸಂರಕ್ಷಣಾ ಅಭಿಯಾನ ‘ಜಲವೇ ಜೀವ’ ಸಪ್ತಾಹದಲ್ಲಿ 5,33,642 ಜನರು ಪ್ರತಿಜ್ಞೆ ಸ್ವೀಕರಿಸಿದ್ದರು.

ಬುಧವಾರ ನಗರದ ಖಾಸಗಿ ಹೋಟೆಲ್​ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರ ಸ್ವಪ್ನಿಲ್ ಡಂಗಾರಿಕರ್​ ಅವರಿಂದ ಡಿಸಿಎಂ ಡಿಕೆ ಶಿವಕುಮಾರ್​,​ ಜಲ ಮಂಡಳಿಯ ಪರವಾಗಿ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಪಡೆದುಕೊಂಡರು.

ಬಿಡಬ್ಲ್ಯೂಎಸ್ಎಸ್ಬಿಯ ಪ್ರಯತ್ನವನ್ನು ಶ್ಲಾಘಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬಳಿಕ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ಬಿಡಬ್ಲ್ಯೂಎಸ್ಎಸ್ಬಿಯ ಪ್ರಯತ್ನವನ್ನು ಶ್ಲಾಘಿಸಿದರು. ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆ ಬೃಹದಾಕಾರವಾಗಿ ಬೆಳೆದಿರುವ ಕಾರಣಕ್ಕೆ ಗ್ರೇಟರ್‌ ಬೆಂಗಳೂರು ಆಗಿ ಪರಿವರ್ತನೆ ಮಾಡಿದ್ದೇವೆ. ಜಲಮಂಡಳಿಯು ಕಳೆದ 10 ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ವರ್ಷಕ್ಕೆ ಸುಮಾರು 400 ರಿಂದ 500 ಕೋಟಿ ರೂ. ನಷ್ಟ ಆಗುತ್ತಿದೆ ಎಂಬ ಮಾಹಿತಿಯಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜಲಮಂಡಳಿಗೆ ವಾರ್ಷಿಕವಾಗಿ ನಷ್ಟವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಯಾರಿಗೂ ತೊಂದರೆ ಆಗದಂತೆ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದರು.

ಡಿಕೆ ಶಿವಕುಮಾರ್​ ಟ್ವೀಟ್​

ಕಾವೇರಿ 5ನೇ ಹಂತದ ಯೋಜನೆ ಜಾರಿಗೊಳಿಸುವ ಸಂದರ್ಭ ಹಲವು ಸವಾಲುಗಳು ಎದುರಾದವು. ಸುಮಾರು 2 ಕೋಟಿ ಜನಸಂಖ್ಯೆಗೆ ಶುದ್ಧವಾದ ನೀರನ್ನು ಒದಗಿಸಲು ಕಾವೇರಿ 6ನೇ ಹಂತದ ಡಿಪಿಆರ್‌ ಸಿದ್ಧತೆ ನಡೆಸಲಾಗುತ್ತದೆ. ಅಲ್ಲಲ್ಲಿ ಕಾವೇರಿ ನೀರಿನ ದುರ್ಬಳಕೆಯೂ ಆಗುತ್ತಿದೆ. ಶೇ.30ರಷ್ಟು ಜನರು ಕಾವೇರಿ ನೀರಿನ ಶುಲ್ಕವನ್ನು ಪಾವತಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಹೋಗುವ, ಅಲ್ಲಿಂದ ಬರುವ ಪ್ರಯಾಣಿಕರೇ ಗಮನಿಸಿ: ಈ ಫ್ಲೈಓವರ್ ರಾತ್ರಿ ಬಂದ್

ಮನುಷ್ಯ, ಪ್ರಾಣಿಗಳು ಸೇರಿದಂತೆ ಪ್ರತಿಯೊಂದು ವರ್ಗದವರಿಗೂ ನೀರು ಅತ್ಯಗತ್ಯ. ಗಂಗೆಯನ್ನು ಉಳಿಸಲು 5 ಲಕ್ಷಕ್ಕೂ ಹೆಚ್ಚು ಜನರು ಜಲಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿ, ಮತ್ತೊಬ್ಬರಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ನಾವೆಲ್ಲರು ಸೇರಿ ಪರಿಸರವನ್ನು ಉಳಿಸುವ ಕೆಲಸವನ್ನು ಮಾಡಿದಾಗ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: KRS Dam Water Level: ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್​​ಎಸ್ ಡ್ಯಾಂ: ಭರ್ತಿಯಾಗಲು 9 ಅಡಿ ಅಷ್ಟೇ ಬಾಕಿ

ಪರಿಸರ ಸಂರಕ್ಷಣೆಗಾಗಿ ಶಾಲೆಗಳಲ್ಲಿ ಪರಿಸರ ಜಾಗೃತಿ ಕ್ಲಬ್ ರಚಿಸಲಾಗುತ್ತಿದೆ. ಮಕ್ಕಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅತ್ಯಂತ ಕಡಿಮೆ ಸಮಯದಲ್ಲಿ ಜಲಸಂರಕ್ಷಣೆ ಪ್ರತಿಜ್ಞೆ ಸ್ವೀಕರಿಸಿ, ಗಿನ್ನಿಸ್ ವಿಶ್ವದಾಖಲೆಯ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.