Apple iPhone X: ಆನ್ಲೈನ್ನಲ್ಲಿ ಐಫೋನ್ X ಬದಲು ಸೆಕೆಂಡ್ ಹ್ಯಾಂಡ್ ಮೊಬೈಲ್ ಡೆಲಿವರಿ; ಆಮೇಲೇನಾಯ್ತು?
Paytm Mall | ಬೆಂಗಳೂರಿನ ಕಟ್ಟಿಗೇನಹಳ್ಳಿಯವರಾದ ವಿಶಾಖ 2018ರಲ್ಲಿ 88,198 ರೂ. ನೀಡಿ ಆನ್ಲೈನ್ನಲ್ಲಿ ಐಫೋನ್ X ಆರ್ಡರ್ ಮಾಡಿದ್ದರು. ಬಾಕ್ಸ್ ಓಪನ್ ಮಾಡಿ ನೋಡಿದರೆ ಅದರಲ್ಲಿ ಈಗಾಗಲೇ ಬೇರೊಬ್ಬರು ಬಳಸಿ ಡ್ಯಾಮೇಜ್ ಆಗಿದ್ದ ಐಫೋನ್ 6ಎಸ್ ಇತ್ತು.
ಬೆಂಗಳೂರು: ಆನ್ಲೈನ್ ಖರೀದಿಯಲ್ಲಿ ನಾವು ಅಂದುಕೊಂಡ ಗುಣಮಟ್ಟದ ವಸ್ತು ಸಿಗದೇ ಇದ್ದಾಗ ಕೋಪ, ಬೇಸರವಾಗುವುದು ಸಹಜ. ಕೆಲವೊಮ್ಮೆ ಏನೋ ಆರ್ಡರ್ ಮಾಡಿದವರಿಗೆ ಇನ್ನೇನೋ ಸಿಕ್ಕಿ ಅವಾಂತರಗಳಾದ ಪ್ರಸಂಗಗಳೂ ನಡೆದಿವೆ. ಬೆಂಗಳೂರಿನ 24 ವರ್ಷದ ಯುವತಿಯೊಬ್ಬರು ಪೇಟಿಎಂ ಮಾಲ್ (Paytm Mall) ಆ್ಯಪ್ನಲ್ಲಿ ಹೊಸದಾದ ಐಫೋನ್ X (iPhone X) ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬಂದಿದ್ದು 4 ವರ್ಷ ಹಳೆಯ ಈಗಾಗಲೇ ಬೇರೊಬ್ಬರು ಬಳಸಿ ಪಾಸ್ವರ್ಡ್ ಹಾಕಿಟ್ಟಿದ್ದ ಸೆಕೆಂಡ್ ಹ್ಯಾಂಡ್ ಮೊಬೈಲ್. ಐಫೋನ್ X ಬದಲಿಗೆ ಡ್ಯಾಮೇಜ್ ಆದ ಐಫೋನ್ 6ಎಸ್ (iPhone 6S) ಬಂದಿದ್ದು ನೋಡಿ ಆ ಯುವತಿ ಕೆಂಡಾಮಂಡಲರಾಗಿದ್ದಾರೆ. ತನಗಾದ ಮೋಸದ ಬಗ್ಗೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ ಆಕೆಗೆ 88,198 ರೂ. ಹಾಗೂ ಆಕೆಯ ಕೇಸ್ ವಹಿವಾಟಿನ ಖರ್ಚಿಗೆ 5000 ರೂ. ಸೇರಿಸಿ ನೀಡುವಂತೆ ನ್ಯಾಯಾಲಯ ಆ ಐಫೋನ್ ಮಾರಾಟಗಾರರಿಗೆ ಆದೇಶ ನೀಡಿದೆ.
ಬೆಂಗಳೂರಿನ ಕಟ್ಟಿಗೇನಹಳ್ಳಿಯವರಾದ ವಿಶಾಖ ರುಂಗ್ಟ 2018ರಲ್ಲಿ 88,198 ರೂ. ನೀಡಿ ಆನ್ಲೈನ್ನಲ್ಲಿ ಐಫೋನ್ X ಆರ್ಡರ್ ಮಾಡಿದ್ದರು. ಆ್ಯಪಲ್ ಐಫೋನ್ ನ್ಯೂ ಮಾಡೆಲ್ ಎಂದು ಬರೆದುಕೊಂಡಿದ್ದ ಬಾಕ್ಸ್ ಓಪನ್ ಮಾಡಿ ನೋಡಿದರೆ ಅದರಲ್ಲಿ ಈಗಾಗಲೇ ಬೇರೊಬ್ಬರು ಬಳಸಿ ಡ್ಯಾಮೇಜ್ ಆಗಿದ್ದ ಐಫೋನ್ 6ಎಸ್ ಇತ್ತು. ಇದನ್ನು ನೋಡಿ ವಿಶಾಖ ಶಾಕ್ ಆಗಿದ್ದರು. 88 ಸಾವಿರ ರೂ. ಪಂಗನಾಮ ಹಾಕಿದ್ದ ಮಾರಾಟಗಾರರ ವಿರುದ್ಧ ಪೇಟಿಎಂ ಹೆಲ್ಪ್ಲೈನ್ಗೆ ಫೋನ್ ಮಾಡಿದರೂ ಅವರು ಸರಿಯಾದ ಸ್ಪಂದನೆ ನೀಡಲಿಲ್ಲ.
ಹೀಗಾಗಿ, ಹೊಸ ಐಫೋನ್ ಬಾಕ್ಸ್ನಲ್ಲಿ ಹಳೆಯ ಫೋನ್ ಇಟ್ಟು ಕಳುಹಿಸಿದ್ದ ಮಾರಾಟಗಾರರ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ ಅವರು ಗ್ರಾಹಕರ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಪೇಟಿಎಂ ಇ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಾರಾಟಗಾರರಿಬ್ಬರ ವಿರುದ್ಧವೂ ದೂರು ನೀಡಿದ ವಿಶಾಖ ಅವರಿಗೆ ಇದೀಗ ಜಯ ಸಿಕ್ಕಿದೆ.
ಪೇಟಿಂನ ರಿಜಿಸ್ಟರ್ಡ್ ಸೆಲ್ಲರ್ನಿಂದಲೇ ಆ ಮೊಬೈಲ್ ಡೆಲಿವರಿಯಾಗಿದ್ದು, ಈ ರೀತಿ ಗ್ರಾಹಕರಿಗೆ ಮೋಸ ಮಾಡಿರುವ ಪೇಟಿಎಂ ಹಾಗೂ ಮಾರಾಟಗಾರರಿಗೆ ದಂಡ ವಿಧಿಸಬೇಕೆಂದು ವಿಶಾಖ ಪರ ವಕೀಲರು ವಾದಿಸಿದ್ದರು. ಆದರೆ, ಪೇಟಿಎಂ ಯಾವುದೇ ಪ್ರಾಡಕ್ಟ್ಗಳನ್ನು ಉತ್ಪಾದಿಸುವುದಿಲ್ಲ, ಮಾರಾಟ ಮಾಡುವುದೂ ಇಲ್ಲ. ಅದು ಕೇವಲ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಮಧ್ಯವರ್ತಿಯಾಗಿ ಮಾತ್ರ ಕೆಲಸ ಮಾಡುತ್ತದೆ. ಮಾರಾಟಗಾರರು ದೆಹಲಿಯಿಂದ ಈ ಐಫೋನ್ ಬಾಕ್ಸ್ ಅನ್ನು ಕೊರಿಯರ್ ಮಾಡಿದ್ದರು. ಅದನ್ನು ಗ್ರಾಹಕರಿಗೆ ನಾವು ತಲುಪಿಸಿದ್ದೇವೆ. ಇದರಲ್ಲಿ ಪೇಟಿಎಂನ ತಪ್ಪೇನೂ ಇಲ್ಲ ಎಂದು ಪೇಟಿಎಂ ಪರ ವಕೀಲರು ವಾದಿಸಿದ್ದರು.
ಈ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಪೇಟಿಎಂನಲ್ಲಿ ಹೆಸರು ರಿಜಿಸ್ಟರ್ ಮಾಡಿಕೊಂಡಿರುವ ದೆಹಲಿಯ ಮಾರಾಟಗಾರರಾದ ನ್ಯೂಜೆನ್ ಪಾರ್ಟನರ್ಸ್ ತಪ್ಪಿತಸ್ಥರೆಂಬುದು ಖಾತರಿಯಾಗಿದೆ. ಹೀಗಾಗಿ, ಆಕೆ ಈಗಾಗಲೇ ಪಾವತಿ ಮಾಡಿರುವ 88,198 ರೂ. ಹಣ ಹಾಗೂ 5,000 ರೂ. ಸೇರಿಸಿ 45 ದಿನದೊಳಗೆ ಆಕೆಗೆ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: Bengaluru Metro: ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್ ಒಪ್ಪಿಗೆ; ವೇಗ ಪಡೆದುಕೊಳ್ಳಲಿದೆ ಬೆಂಗಳೂರು ಮೆಟ್ರೋ ಕಾಮಗಾರಿ
Karnataka Weather Today: ಮಲೆನಾಡು, ಕರಾವಳಿಯಲ್ಲಿ ಇನ್ನೆರಡು ದಿನ ಮಳೆ; ಬೆಂಗಳೂರಿನ ಇಂದಿನ ಹವಾಮಾನ ಹೀಗಿದೆ
(Bengaluru Woman who Ordered iPhone X in Paytm Mall gets Damaged iPhone 6S wins Compensation by Seller)