
ಬೆಂಗಳೂರು, ಜುಲೈ 21: ಮಗಳು ಪ್ರಾಪ್ತವಯಸ್ಕಳಾದ (Major) ನಂತರ ತಂದೆಯಿಂದ ದೂರವಾದ ತಕ್ಷಣಕ್ಕೆ, ಆಕೆಯ ಶಿಕ್ಷಣದ ವೆಚ್ಚವನ್ನು ಭರಿಸುವ ಹೊಣೆಗಾರಿಕೆಯಿಂದ ತಂದೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಹೈ ಕೋರ್ಟ್ (High Court) ಅತ್ಯಂತ ಮಹತ್ವದ ಆದೇಶ ನೀಡಿದೆ. ಮಂಗಳೂರಿನ ಯುತವತಿಯೊರ್ವಳ ಎಂಡಿ (MD) ಶಿಕ್ಷಣಕ್ಕಾಗಿ 16 ಲಕ್ಷ ರೂಪಾಯಿ ಶುಲ್ಕ ಪಾವತಿಸುವಂತೆ ಉದ್ಯಮಿಯೂ ಆದಂತ್ ಆಕೆಯ ತಂದೆಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಮಂಗಳೂರು ಮೂಲದ ದಂಪತಿಯಿಬ್ಬರ ಮಗಳಿಗೆ ಎಂ.ಬಿ.ಬಿ.ಎಸ್ (MBBS) ಕೋರ್ಸ್‌ಗೆ ಪ್ರವೇಶ ಕೊಡಿಸಲಾಗಿತ್ತು. ಇದಕ್ಕೆ ತಂದೆಯ ಸಮ್ಮತಿಯೂ ಇತ್ತು. ಆದರೆ, ಮಗಳು ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ದಂಪತಿ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ ಇಬ್ಬರೂ ದೂರವಾಗಿದ್ದರು.
ಮಗಳು ನೀಟ್ (NEET) ಪರೀಕ್ಷೆಯ ಮೂಲಕ ಮಂಗಳೂರಿನ ಕಾಲೇಜೊಂದರಲ್ಲಿ ಎಂಡಿ (ಡರ್ಮಟಾಲಜಿ) ಸ್ನಾತಕೋತ್ತರ ಪದವಿಗೆ ಸೀಟು ಪಡೆದುಕೊಂಡ ನಂತರ, ಕಾಲೇಜು ಶುಲ್ಕವಾದ 16 ಲಕ್ಷ ರೂಪಾಯಿಯನ್ನು ಪಾವತಿಸಲು ತಂದೆಗೆ ನಿರ್ದೇಶನ ನೀಡುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದಳು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗೃಹಬಂಧನದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005ರ (Protection of Women from Domestic Violence Act) ಸೆಕ್ಷನ್ 20(d) ಅಡಿಯಲ್ಲಿ ತಂದೆಯ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ, 16 ಲಕ್ಷ ರೂ. ಪಾವತಿಸುವಂತೆ ಆದೇಶಿಸಿತ್ತು. ಇದನ್ನು ತಂದೆಯು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೂ, ಅಲ್ಲಿಯೂ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಕೊನೆಗೆ ಹೈಕೋರ್ಟ್‌ಗೆ ರಿವಿಷನ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಪೀಠವು ತಂದೆಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರ ತಂದೆಯು ಕೋಟಿಗೂ ಅಧಿಕ ಮೊತ್ತದ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಮಗಳ ವೈದ್ಯಕೀಯ ಶಿಕ್ಷಣದ ಆರಂಭದಿಂದಲೂ ತಂದೆಯ ಭಾಗವಹಿಸುವಿಕೆ ಇದೆ. ಹೀಗಿರುವಾಗ ಸ್ನಾತಕೋತ್ತರ ಶಿಕ್ಷಣದ ವೆಚ್ಚ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಅಗತ್ಯಬಿದ್ದರೆ ಬ್ಯಾಂಕ್ ಸಾಲ ಪಡೆದಾದರೂ ಈ ಶುಲ್ಕವನ್ನು ಚುಕ್ತಾ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ ಮೈಸೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್: ಮೂವರು ಅರೆಸ್ಟ್
ಪ್ರಾಪ್ತವಯಸ್ಕಳಾದ ಮಗಳಿಗೆ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಆರ್ಥಿಕ ಪರಿಹಾರ ಪಡೆಯುವ ಹಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೈಕೋರ್ಟ್, ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣವಾಗಲಿ, ಮಗಳ ಶಿಕ್ಷಣದ ವೆಚ್ಚವನ್ನು ತಂದೆಯೇ ಭರಿಸಬೇಕು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ ಎಂದು ಸ್ಪಷ್ಟಪಡಿಸಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ