ಮೊಟ್ಟ ಮೊದಲು ಬಾರಿಗೆ ಸರ್ಕಾರದಿಂದ ತೃತೀಯ ಲಿಂಗಿಗಳ ಆಶ್ರಯ ಜಾಗ: ನಮ್ಮನೆ ಸುಮ್ಮನೆಗೆ ಭೂಮಿ ಪೂಜೆ ಮಾಡಿದ ಅಶೋಕ್
ರಾಜ್ಯ ಸರ್ಕಾರ ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಿದ್ದು, ಆ ಸೇವಾ ಕಾರ್ಯಕ್ಕೆ ಇಂದು ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.
ಬೆಂಗಳೂರು: ಮೊಟ್ಟಮೊದಲು ಬಾರಿಗೆ ರಾಜ್ಯ ಸರ್ಕಾರ (State Government) ತೃತೀಯ ಲಿಂಗಿಗಳಿಗೆ (transgenders) ಸಮಾಜದಲ್ಲಿ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಿದ್ದು, ಆ ಸೇವಾ ಕಾರ್ಯಕ್ಕೆ ಇಂದು ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ತೃತೀಯ ಲಿಂಗಿಗಳು ಅಂದರೆ ಸೆಕ್ಸ್ ವರ್ಕರ್ಸ್, ಸಿಗ್ನಲ್‌ಗಳ ಬಳಿ ಭಿಕ್ಷೆ ಬೇಡುವವರು, ಸಮಾಜದಲ್ಲಿ ಅವರು ಇರೋಕೆ ನಾಲಾಯಕ್ಕೂ ಅಂತ ಕೀಳಾಗಿ ಕಾಣೋರೆ ಹೆಚ್ಚು. ಸಮಾಜದಲ್ಲಿ ಪುರುಷರಿಗೆ ಮಹಿಳೆಯರಿಗೆ ಹೇಗೆ ಸ್ಥಾನಮಾನವಿದೆಯೋ ಅದೇ ರೀತಿ ತೃತೀಯ ಲಿಂಗಿಗಳಿಗೂ ಸಮಾಜದಲ್ಲಿ ಸೂಕ್ತ ಸ್ಥಾನ ಮಾನ ಸಿಗಬೇಕು ಅನ್ನೋ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಆಶ್ರಯ ಕಲ್ಪಿಸಲು ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಸುಮಾರು 20 ಗುಂಟೆ ಜಾಗ ಮಂಜೂರು ಮಾಡಿದೆ. ಇಂದು ಆ ಜಾಗದಲ್ಲಿ ನಮ್ಮನೆ ಸುಮ್ಮನೆ ಎಂಬ ಹೆಸರಿನಲ್ಲಿ ತೃತೀಯ ಲಿಂಗಿಗಳ ಆಶ್ರಮ ನಿರ್ಮಾಣಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೂಮಿ ಪೂಜೆ ನೆರವೇರಿಸಿದರು.
ಇನ್ನೂ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ, ಸಾಲು ಮರದ ತಿಮ್ಮಕ್ಕ, ಸಂತೋಷ್ ಗುರೂಜಿ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ನಮ್ಮಂತೆಯೇ ಅವರಿಗೂ ಒಂದು ಜೀವನವಿದೆ. ಅವರಿಗೂ ಸಮಾಜದಲ್ಲಿ ಸ್ಥಾನಮಾನ ಸಿಗಬೇಕು. ಇಂದು ತೃತೀಯ ಲಿಂಗಿಯಾದ್ರು ಮೆಕಾನಿಕಲ್, ಇಂಜಿನಿಯರಿಂಗ್ ಮಾಡಿ ಡಾಕ್ಟರೇಟ್ ಪಡೆದು ಅನಾಥಾಶ್ರಮ ನಡೆಸುತ್ತಿರೋ ಡಾ. ನಕ್ಷತ್ರ ಅವರ ಸಾಧನೆ ಎಲ್ಲರೂ ಹೆಮ್ಮೆ ಪಡುವಂತಹ ವಿಷಯ ಎಂದು ಹೇಳಿದರು.
ಅವರ ಸಾಧನೆ, ತೃತೀಯ ಲಿಂಗಿಗಳ ಮೇಲಿನ ಕಾಳಜಿ ನೋಡಿ ಖುದ್ದು ನಾನೇ ಆಶ್ರಮ ನಿರ್ಮಾಣಕ್ಕೆ 20 ಗುಂಟೆ ಜಮೀನು ಮಂಜೂರು ಮಾಡಿದ್ದು, ಅವರ ಆಶ್ರಯಕ್ಕಿಂತಲೇ ಈ ಆಶ್ರಮ ನಿರ್ಮಾಣದ ಪೂಜೆ ನೆರವೇರಿಸಿದ್ದೀನೆ ಶೀಘ್ರದಲ್ಲೆ ಸ್ಥಳೀಯ ಶಾಸಕರ ನೆರವು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಶ್ರಮ ಹಾಗೂ ಶಾಲಾ ಕಾಲೇಜು ನಿರ್ಮಾಣ ಮಾಡುವುದಾಗಿ ತಿಳಿಸಿದರು. ಒಟ್ಟಾರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೃತೀಯ ಲಿಂಗದವರಿಗೆ ಪ್ರೋತ್ಸಾಹ ನೀಡುತ್ತಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ
Published On - 10:37 pm, Wed, 2 November 22