
ಬೆಂಗಳೂರು, ನವೆಂಬರ್ 27: ಬೆಂಗಳೂರು ಮಹಾನಗರವಾಗಿ ಬೆಳೆದಿದ್ದರೂ ಅದಕ್ಕೆ ತಕ್ಕ ಸೌಲಭ್ಯಗಳನ್ನ ಹೊಂದಿಲ್ಲ. ಹೀಗಾಗಿಯೇ ದೇಶದ ಇತರೆ ಮಹಾನಗರಗಳಂತೆಯೇ ಬೆಂಗಳೂರಿನಲ್ಲೂ 24/7 ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನ ತೆರೆಯಲು ಅನುಮತಿ ನೀಡುವಂತೆ ಹೋಟೆಲ್ಗಳ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಗೋವಾ ಸೇರಿದಂತೆ ಬೇರೆ ಮೆಟ್ರೋ ನಗರಗಳಲ್ಲಿ ಈಗಾಗಲೇ 24/7 ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂಬುದನ್ನೂ ಸಂಘ ಸರ್ಕಾರದ ಗಮನಕ್ಕೆ ತಂದಿದೆ.
ಹೋಟೆಲ್ ಉದ್ಯಮದ ಬಹುಕಾಲದ ಈ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದಾರೆ. ಇನ್ನು ಪ್ರಧಾನಮಂತ್ರಿಯವರು ಕೂಡ ಮಾಲ್, ಮಲ್ಟಿಪ್ಲೆಕ್ಸ್, ಹೋಟೆಲ್, ರೆಸ್ಟೋರೆಂಟ್ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹೆಚ್ಚಿನ ಸಮಯ ತೆರೆದಿಟ್ಟರೆ ಬೆಂಗಳೂರಿನಲ್ಲಿ ಹಗಲಿನ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಹೋಟೆಲ್ ಸಂಘದ ಈ ಮನವಿಗೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಿದ್ದು, ವಿಶೇಷವಾಗಿ ರಾತ್ರಿ ವೇಳೆ ಕೆಲಸ ಮಾಡುವ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾತ್ರಿ ವ್ಯಾಪಾರ ಹೆಚ್ಚಾದರೆ ಹಗಲಿನ ಟ್ರಾಫಿಕ್ ಒತ್ತಡ ಕಡಿಮೆಯಾಗಲಿದೆ ಎಂಬುದು ಸಂಘದ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ
ಸದ್ಯ ಪೊಲೀಸ್ ಇಲಾಖೆಯ ಹೊಸ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಸಂಘದ ಮನವಿಗೆ ಸ್ಪಂದಿಸಿ ಪೊಲೀಸ್ ಇಲಾಖೆಯು ಆದಷ್ಟು ಬೇಗ ಈ ಕುರಿತು ಹೊಸ ಆದೇಶವನ್ನು ಹೊರಡಿಸಬೇಕು ಎಂದು ಬೆಂಗಳೂರು ಹೋಟೆಲ್ಗಳ ಸಂಘ ನಿರೀಕ್ಷೆ ವ್ಯಕ್ತಪಡಿಸಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಇತರ ಕೆಲವು ರಾಜ್ಯಗಳಂತೆ ಸಿಲಿಕಾನ್ ಸಿಟಿಯಲ್ಲಿಯೂ 24/7 ಹೋಟೆಲ್ಗಳ ಸೌಲಭ್ಯ ಜನರಿಗೆ ಸಿಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.