ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ 40 ಸಾವಿರ ಮದ್ರಾಸ್ ಐ ಪ್ರಕರಣಗಳು ಪತ್ತೆ
ಕರ್ನಾಟಕದಲ್ಲಿ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಜುಲೈ 25 ಮತ್ತು ಆಗಸ್ಟ್ 4 ರ ನಡುವೆ ಕೇವಲ ಒಂದು ವಾರದಲ್ಲಿ 40,477 ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರು: ಕರ್ನಾಟಕದಲ್ಲಿ ಕಾಂಜಂಕ್ಟಿವಿಟಿಸ್ (Conjunctivitis) ಅಥವಾ ಮದ್ರಾಸ್ ಐ (Madras Eye) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಜುಲೈ 25 ಮತ್ತು ಆಗಸ್ಟ್ 4 ರ ನಡುವೆ ಕೇವಲ ಒಂದು ವಾರದಲ್ಲಿ 40,477 ಪ್ರಕರಣಗಳು ಪತ್ತೆಯಾಗಿವೆ. ಅತಿ ಹೆಚ್ಚು ಪ್ರಕರಣಗಳು ಬೀದರ್ (7,693) ಜಿಲ್ಲೆಯಲ್ಲಿ ವರದಿಯಾಗಿವೆ. ಹಾವೇರಿ (6,558), ರಾಯಚೂರು (6,493), ಶಿವಮೊಗ್ಗ (3,411), ಮತ್ತು ವಿಜಯನಗರ (2,200) ಜನರು ರೋಗಕ್ಕೆ ತುತ್ತಾಗಿದ್ದಾರೆ. ಇನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಮವಾಗಿ 145 ಮತ್ತು 192 ಪ್ರಕರಣಗಳು ವರದಿಯಾಗಿವೆ. ಮುಂದಿನ ದಿನಗಳಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ನೇತ್ರಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಯೂ ಸಹ ಪ್ರಕರಣಗಳು ಸಾಕಷ್ಟು ಹೆಚ್ಚಿವೆ. ಕಳೆದ ಎರಡು ವಾರಗಳಲ್ಲಿ 400 ಮದ್ರಾಸ್ ಐ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಪ್ರತಿದಿನ ಕನಿಷ್ಠ 30 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಆಸ್ಪತ್ರೆಯಲ್ಲಿರುವ 33 ವೈದ್ಯರಲ್ಲಿ ಆರು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.
ಇದನ್ನೂ ಓದಿ: Eye Care: ವಾಯು ಮಾಲಿನ್ಯದಿಂದ ಕಣ್ಣುಗಳಲ್ಲಿ ಕಾಂಜಂಕ್ಟಿವಿಟಿಸ್ ಬರಬಹುದು; ಇರಲಿ ಎಚ್ಚರ
ಬೆಂಗಳೂರಿನಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಹೆಚ್ಚಾಗಿ ಮದ್ರಾಸ್ ಐ ರೋಗಿಗಳು ಹೋಗುತ್ತಿದ್ದಾರೆ. ನಾವು ವಾರಕ್ಕೆ 32 ಪ್ರಕರಣಗಳನ್ನು ನೋಡುತ್ತಿದ್ದೇವೆ. ಮಳೆಗಾಲದಲ್ಲಿ ಮದ್ರಾಸ್ ಐ ರೋಗ ಸಾಮಾನ್ಯ. ಆದರೆ ಈ ಬಾರಿ ರೋಗದ ತೀರ್ವತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ನೇತ್ರತಜ್ಞ ಡಾ. ಶೀತಲ್ ಬಲ್ಲಾಳ್ ಹೇಳಿದರು.
ವೈರಸ್‌ನಲ್ಲಿ ಬದಲಾವಣೆಯಿಂದ ಇದು ಹೆಚ್ಚು ಹರಡುತ್ತಿದೆ. ಮೊದಲು ಇದು ಹೆಚ್ಚಾಗಿ ಅಡೆನೊವೈರಸ್‌ನಿಂದ ಉಂಟಾಗುತ್ತಿತ್ತು. ಇದೀಗ ಅಡೆನೊವೈರಸ್ ಜೊತೆಗೆ ಎಂಟ್ರೊವೈರಸ್ ಕೂಡ ಹರಡಿದೆ. ವಾತಾವರಣದ ಬದಲಾವಣೆಗಳು, ತಾಪಮಾನ ಮತ್ತು ಮಳೆಯಲ್ಲಿನ ಬದಲಾವಣೆಗಳು ಸೋಂಕಿಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ