
ಬೆಂಗಳೂರು, ಸೆಪ್ಟೆಂಬರ್ 1: ಇಬ್ಬರು ಹೆಂಡತಿಯರ ಗಂಡನೊಬ್ಬ 26 ವರ್ಷದ ವಿಧವೆ ಜೊತೆ ಲಿವಿಂಗ್ ಟುಗೆದರ್ನಲ್ಲಿದ್ದು, ಕೊನೆಗೆ ಆ ಯುವತಿ ಬೇರೊಬ್ಬರೊಂದಿಗೆ ಸಲುಗೆ ಬೆಳೆಸಿರುವುದನ್ನು ಕಂಡು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಆನೇಕಲ್ ಬಳಿ ನಡೆದಿದೆ. ಅಂದಹಾಗೆ, ಆರೋಪಿ ವಿಠ್ಠಲ ಏನೂ ನವಯುವಕನಲ್ಲ, 52 ವರ್ಷ ವಯಸ್ಸಿನ ವ್ಯಕ್ತಿ! ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿರುವ ವಿಠ್ಠಲನನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮೃತ ಯುವತಿಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆನೇಕಲ್ ಬಳಿಯ ಮಳೆನಲ್ಲಸಂದ್ರ ಗ್ರಾಮದ ನಿವಾಸಿಗಳಾಗಿದ್ದಾರೆ.
ಆರೋಪಿ ವಿಠ್ಠಲನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತ್ನಿ ಮೃತಪಟ್ಟಿದ್ದು ನಂತರ ಮತ್ತೊಂದು ಮದುವೆಯಾಗಿದ್ದ. ಎರಡನೇ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಳು. ಅತ್ತ ವನಜಾಕ್ಷಿಗೆ ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಈ ನಡುವೆ ವಿಠ್ಠಲ ವಿಧವೆ ವನಜಾಕ್ಷಿಯ ಸಾಂಗತ್ಯ ಬೆಳೆಸಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ವನಜಾಕ್ಷಿ ಜೊತೆ ಲಿವಿಂಗ್ ಟುಗೆದರ್ನಲ್ಲಿದ್ದ.
ಕಳೆದ ಕೆಲವು ದಿನಗಳಿಂದ ವನಜಾಕ್ಷಿ ಆತನನ್ನು ಕಡೆಗಣಿಸುತ್ತಿದ್ದಳು. ಅಲ್ಲದೆ, ಮಾಡಿ ಅದೇ ಗ್ರಾಮದ ಮತ್ತೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು. ಕಳೆದೊಂದು ತಿಂಗಳಿನಿಂದ ಇದೇ ವಿಚಾರಕ್ಕೆ ವಿಠ್ಠಲ ಹಾಗೂ ವನಜಾಕ್ಷಿ ನಡುವೆ ಜಗಳವಾಗುತ್ತಿತ್ತು.
ಇದನ್ನೂ ಓದಿ: ಬೆಂಗಳೂರಿನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ; ಹಲ್ಲೆ ಮಾಡಿ ದುಡ್ಡಿನೊಂದಿಗೆ ಆರೋಪಿ ಪರಾರಿ
ಕಳೆದ ಶನಿವಾರ ವನಜಾಕ್ಷಿ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೊಸ ಸ್ನೇಹಿತನ ಜೊತೆ ಸ್ಯಾಂಟ್ರೋ ಕಾರಲ್ಲಿ ತೆರಳುತ್ತಿದ್ದಳು. ಇದನ್ನು ನೋಡಿದ ವಿಠ್ಠಲ, ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿಕಾರನ್ನು ಹಿಂಬಾಲಿಸಿದ್ದ. ಆನಂತರ ಪದೇಪದೇ ಹಾರ್ನ್ ಮಾಡಿ ಮುಂದಿನಿಂದ ಹೋಗುತ್ತಿದ್ದ ವನಜಾಕ್ಷಿ ಇದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸುವಂತೆ ಮಾಡಿದ್ದ. ಕಾರು ನಿಲ್ಲಿಸುತ್ತಿದ್ದಂತೆಯೇ 5 ಲೀಟರ್ ಪೆಟ್ರೋಲ್ ಅನ್ನು ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಸ್ನೇಹಿತನ ಜೊತೆ ಕಾರಿನಿಂದ ಇಳಿದ ವನಜಾಕ್ಷಿ ಓಡಿ ಹೋಗಲು ಶುರು ಮಾಡಿದ್ದಾಳೆ. ಇಬ್ಬರನ್ನೂ ಹಿಂಬಾಲಿಸಿಕೊಂಡು ಹೋಗಿದ್ದ ವಿಠ್ಠಲ, ಆ ಬಳಿಕ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ನಿಂದ ಬೆಂಕಿ ಹಚ್ಚಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ವನಜಾಕ್ಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇಕಡ 60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.