ಪಾನಿಪೂರಿ ತಿನ್ನೋ ವೇಳೆ ಗಲಾಟೆ: ಸಲ್ಮಾನ್ ಕೊಟ್ಟ ಒಂದೇ ಪಂಚ್ಗೆ ಉಸಿರು ಚೆಲ್ಲಿದ ಭೀಮ
ಆ ಯುವಕ ಉದ್ಯೋಗ ಅರಸಿ ದೂರದ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ. ತನ್ನ ಸ್ನೇಹಿತರ ಜೊತೆಗೂಡಿ ನಗರದಲ್ಲಿ ಕೆಲಸ ಹುಡುಕಿಕೊಂಡು ಅದರಲ್ಲೆ ಜೀವನ ನಡೆಸ್ತಿದ್ದ. ಅದ್ರೆ ಸ್ನೇಹಿತರ ಜೊತೆ ಪಾನಿಪುರಿ ತಿನ್ನಲು ಹೋದ ಯುವಕ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಹೌದು...ಸನ್ಮಾನ್ ಕೊಟ್ಟ ಒಂದೇ ಪಂಚ್ ಗೆ ಭೀಮ ಉಸಿರು ಚೆಲ್ಲಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಸಂಪುರ್ಣ ವಿವರ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 14): ಪಾನಿಪೂರಿ (Panipuri) ತಿನ್ನವ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳೀಯ ಸಲ್ಮಾನ್ ಕೊಟ್ಟ ಪಂಚ್ ಗೆ ಭೀಮ ಎನ್ನುವ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ (Bengaluru) ಪುಟ್ಟೇನಹಳ್ಳಿಯ (Puttenahalli) ಬಳಿಯ ಅರಕೆರೆಯಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಪಾನಿಪೂರಿ ತಿನ್ನಲು ಹೋದ ವೇಳೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆಯಾಗಿದ್ದು, ಈ ವೇಳೆ ಭೀಮಕುಮಾರ್‌ನ ಕತ್ತಿನ ಭಾಗಕ್ಕೆ ಸಲ್ಮಾನ್ ಬಲವಾಗಿ ಒಂದು ಹೊಡೆದಿದ್ದಾನೆ. ಪರಿಣಾಮ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದ ಭೀಮಕುಮಾರ್ ಮೂರು ದಿನಗಳ ನಂತರ ಕೊನೆಯುಸಿರೆಳೆದಿದ್ದಾನೆ.
25 ವರ್ಷದ ಭೀಮಕುಮಾರ್ ಉದ್ಯೋಗ ಅರಸಿಕೊಂಡು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದು, ತನ್ನ ಸ್ನೇಹಿತರ ಜತೆ ಪುಟ್ಟೇನಹಳ್ಳಿಯ ಅರಕೆರೆಯಲ್ಲಿ ವಾಸವಾಗಿದ್ದ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಭೀಮಕುಮಾರನ ಮನೆಗೆ ನಾಲ್ಕೈದು ದಿನಗಳ ಸ್ನೇಹಿತರು ಬಂದಿದ್ದರು. ನಂತರ ಎಲ್ಲರೂ ಒಟ್ಟಿಗೆ ಪಾನಿಪೂರಿ ತಿನ್ನಲು ಮನೆಯಿಂದ ಹೊರಗಡೆ ಬಂದಿದ್ದಾರೆ. ಅರಕೆರೆಯ ಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಪಾನಿಪೂರಿ ತಿನ್ನುವಾಗ ಅಲ್ಲಿದ್ದ ಸ್ಥಳೀಯ ಯುವಕ ಸಲ್ಮಾನ್ ಎಂಬಾತನ ಜೊತೆ ಗಲಾಟೆಯಾಗಿದೆ.
ಇದನ್ನೂ ಓದಿ: ಟೀ ಚೆನ್ನಾಗಿಲ್ಲ ಎಂದ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಅಂಗಡಿ ಸಿಬ್ಬಂದಿ
ಅವಾಚ್ಯ ಪದಗಳಿಂದ ಬೈದ ಅಂತಾ ಭೀಮಕುಮಾರ ಮತ್ತು ಸ್ನೇಹಿತರೆಲ್ಲಾ ಸಲ್ಮಾನ್ ಜೊತೆ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಲ್ಮಾನ್, ಭೀಮಕುಮಾರನ ಕುತ್ತಿಗೆಗೆ ಬಲವಾಗಿ ಪಂಚ್ ನೀಡಿದ್ದು, ಒಂದೇ ಏಟಿಗೆ ಭೀಮ ಪ್ರಜ್ನೆ ತಪ್ಪಿ ಕುಸಿದು ಬಿದ್ದಿದ್ದಾನೆ. ಕೆಲ ಹೊತ್ತಿನ ನಂತರ ಭೀಮಕುಮಾರನಿಗೆ ಪ್ರಜ್ನೆ ಬಂದಿದ್ದು, ಸ್ನೇಹಿತರು ರೂಂಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಿದ್ದಾರೆ. ಅದ್ರೆ ಮೂರು ದಿನಗಳಿಂದ ಹಾಸಿಗೆ ಹಿಡಿದಿದ್ದ ಭೀಮಕುಮಾರ, ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಸ್ನೇಹಿತರು ಭೀಮಕುಮಾರನ ಸಾವಿನ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಯುವಕನ ಸಾವಿನ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಸಲ್ಮಾನ್ ನನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮೃತ ಭೀಮಕುಮಾರನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಿದ್ದಾರೆ. ಹೊಡೆದ ರಭಸಕ್ಕೆ ಕೆಳಗೆ ಬಿದ್ದಾಗ ತಲೆಗೆ ಏಟು ಬಿದ್ದು ತಲೆಯ ಒಳಗೆ ರಕ್ತಸ್ರಾವ (ಇಂಟರ್ನಲ್ ಬ್ಲೀಡಿಂಗ್ ) ಆಗಿ ಸಾವನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅದೇನೇ ಇರಲಿ ಪಾನೀಪುರಿ ತಿನ್ನುವ ವೇಳೆ ಉಂಟಾದ ಕ್ಷುಲ್ಲಕ ಗಲಾಟೆ, ಓರ್ವನ ಬಲಿ ಪಡೆದಿದ್ದು ದುರ್ದೈವವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



