ಬೆಂಗಳೂರಿನಲ್ಲಿ ಹೆಚ್ಚಾದ ಅಕ್ಯುಟ್ ಡಯಾರಿಯಲ್ ಡಿಸೀಸ್; ಆರೋಗ್ಯ ಇಲಾಖೆಗೆ ಆತಂಕ
ಈ ಬಾರಿ ಬೇಸಿಗೆಯಲ್ಲಿನ ಬಿರು ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಜನರನ್ನ ಕಾಡಿದೆ. ಬಿಸಿಲ ಧಗೆ, ಮತ್ತೊಂದಡೆ ಬರಗಾಲದ ಕರಿನೆರಳಿನಿಂದ ಕುಡಿಯುವ ನೀರಿಗೂ ಪರದಾಡುವಂತಾಗಿತ್ತು. ಈ ನಡುವೆ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಮಳೆ ಬರ್ತಿದೆ. ಆದರೆ ಇದರ ಜೊತೆಗೆ ನಾನಾ ಆರೋಗ್ಯ ಸಮಸ್ಯೆ ಶುರುವಾಗಿದ್ದು ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆಯಾಗಿದೆ.

ಬೆಂಗಳೂರು, ಮೇ.21: ಸಿಲಿಕಾನ್ ಸಿಟಿ (Bengaluru) ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರ. ಹೊಟ್ಟೆ ನೋವು, ಜ್ವರ, ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಯಾಕಂದ್ರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಅಕ್ಯುಟ್ ಡಯಾರಿಯಲ್ ಡಿಸೀಸ್ (Acute Diarrheal Disease) ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆ ಆರೋಗ್ಯ ಇಲಾಖೆಯ (Health Department) ಟೆನ್ಷನ್ ಹೆಚ್ಚಿಸಿದೆ.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು ಏರಿಕೆ ಕಂಡಿವೆ. ಕಳೆದ ಒಂದೇ ತಿಂಗಳಲ್ಲಿ ಬರೋಬ್ಬರಿ 4500 ಕ್ಕೂ ಹೆಚ್ಚು ಮಂದಿಗೆ ಎಡಿಡಿ (ಅಕ್ಯುಟ್ ಡಯಾರಿಯಲ್ ಡಿಸೀಸ್) ಪತ್ತೆಯಾಗಿದೆ. ಅಲ್ಲದೇ ಕಳೆದ ನಾಲ್ಕು ತಿಂಗಳಲ್ಲಿ 60,100ಕ್ಕೂ ಹೆಚ್ಚು ಮಂದಿಗೆ ಇನ್ನಿತರ ಕರುಳಿನ ಸಮಸ್ಯೆ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಹವಾಮಾನ ಬದಲಾವಣೆ ಮತ್ತು ಇತ್ತೀಚೆಗೆ ಸುರಿದ ಮಳೆಯಿಂದ ನೀರು ಕಲುಷಿತಗೊಂಡಿರುವುದು ಮುಂತಾದ ಕಾರಣಗಳಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರಿಟೈಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇದು ಹರಡುತ್ತಿವೆ. ಹೀಗಾಗಿ ಈ ಪ್ರಕರಣಗಳ ಏರಿಕೆಯಾಗಿದೆ. ಸದ್ಯ ಅಕ್ಯುಟ್ ಡಯಾರಿಯಲ್ ಡಿಸೀಸ್ ಬಗ್ಗೆ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಎಚ್ಚರವಹಿಸುವಂತೆ ಸೂಚಿಸಿದೆ.
ಇನ್ನು ಈಗಾಗಲೇ ಸೊಳ್ಳೆಗಳಿಂದ ಹರಡುವ ಡೆಂಘಿ, ಚಿಕೂನ್ ಗುನ್ಯಾ ಪ್ರಕರಣಗಳೂ ಶುರುವಾಗಿವೆ. ಈಗಾಗಲೇ ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಮೂರು ಸಾವಿರ ದಾಟಿದ್ರೆ ಬೆಂಗಳೂರಿನಲ್ಲಿಯೇ ಸಾವಿರಕ್ಕು ಹೆಚ್ಚು ಡೆಂಘಿ ಕೇಸ್ ವರದಿಯಾಗಿದೆ. ಅಲ್ಲದೆ ಜನವರಿಯಿಂದ ಮೊನ್ನೆಯವರೆಗೆ 18-05-2024 ರವರೆಗೆ 8562 ಮಂದಿಗೆ ಬೆಂಗಳೂರು ಹೊರತುಪಡಿಸಿ ಚಿಕೊನ್ ಗುನ್ಯಾ ಪರೀಕ್ಷೆ ನಡೆಸಿದ್ದು ಈ ಪೈಕಿ 563 ಮಂದಿಗೆ ಚಿಕೊನ್‌ಗುನ್ಯಾ ಖಚಿತವಾಗಿದೆ. ಈ ನಡುವೆ ಕರುಳುಬೇನೆ ಮತ್ತಿತರ ಕರುಳು ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: ಬೀದರ್ನಲ್ಲೊಂದು ಹೈಟೆಕ್ ಸರ್ಕಾರಿ ಆಸ್ಪತ್ರೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ
ಅಕ್ಯುಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳು ಏನು?
- ಕರುಳು ಸಂಬಂಧಿ ರೋಗಗಳಲ್ಲಿ ಆಗಾಗ್ಗೆ ಭೇದಿ, ವಾಕರಿಕೆ ಜೊತೆಗೆ ವಾಂತಿ ಆಗುತ್ತದೆ.
- ಕಿಬ್ಬೊಟ್ಟೆಯ ಸೆಳೆತ
- ಹೊಟ್ಟೆನೋವು
- ಜ್ವರ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
- ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕ ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇವು ಹರಡುತ್ತವೆ
- ಅಶುಚಿತ್ವ ಕೂಡ ರೋಗ ಹರಡಲು ಕಾರಣ
ಒಟ್ನಲ್ಲಿ ಕರುಳುಬೇನೆ ಪ್ರಕರಣಗಳಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕಿದ್ದು ಇಲ್ಲವಾದಲ್ಲಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು ಮಳೆ ನೀರು ನಿಂತು ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಇವುಗಳಿಂದಲೂ ಸಾಂಕ್ರಾಮಿಕ ರೋಗ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೀಗಾಗಿ ರಾಜಧಾನಿಯ ಜನರು ಮಳೆಗಾಲ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



