ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಪ್ರಜೆ ಬೆಂಗಳೂರಿನಲ್ಲಿ ಬಂಧನ: 4 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬುವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಿದ್ದಾರೆ.

ಬೆಂಗಳೂರು, ಮೇ 17: ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳಿಗೆ ಸಿಂಥೆಟಿಕ್ ಡ್ರಗ್ಸ್ (Drugs) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 40 ವರ್ಷದ ಆಫ್ರಿಕನ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು (CCB Police) ಶನಿವಾರ ತಿಳಿಸಿದ್ದಾರೆ. ಬಂಧಿತ ಡೇನಿಯಲ್ ಅರಿಂಜೆ ಒಕ್ವೋಶಾನಿಂದ ಸಿಸಿಬಿ ಪೊಲೀಸರು 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಆರೋಪಿಯು 2023 ರ ಡಿಸೆಂಬರ್ನಲ್ಲಿ ವ್ಯಾಪಾರ ವೀಸಾದ ಮೇಲೆ ಬೆಂಗಳೂರಿಗೆ ಆಗಮಿಸಿ, ಸೋಲದೇವನಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಒಕ್ವೋಶಾ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಡ್ರಗ್ಸ್ ಮಾರಾಟದಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಆತನ ಸ್ನೇಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಇತರ ರಾಜ್ಯಗಳಲ್ಲಿರುವ ತಮ್ಮ ಸಹವರ್ತಿಗಳಿಂದ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಸ್ಥಳೀಯ ಕೆಲವು ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಅವರು ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರನ್ನು ಗುರಿಯಾಗಿಸಿಕೊಂಡಿದ್ದರು ಎಂದು ತನಿಖೆ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಬಂಧಿತನಿಂದ ಪೊಲೀಸರು 1.48 ಕೆಜಿ ಬಿಳಿ ಬಣ್ಣದ ಎಂಡಿಎಂಎ ಡ್ರಗ್ಸ್ ಮತ್ತು 1.1 ಕೆಜಿ ಕಂದು ಬಣ್ಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಹೆಚ್ಚಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ವೃತ್ತಿಪರರನ್ನೇ ಡ್ರಗ್ಸ್ ಮಾಫಿಯಾ ಗುರಿಯಾಗಿಸುತ್ತಿದೆ. ಇಂಥ ಕೃತ್ಯಗಳ ವಿರುದ್ಧ ಸಿಸಿವಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








