ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ಶಿಕ್ಷಣ ಸಚಿವ ನಾಗೇಶ್ ವಜಾಗೊಳಿಸುವಂತೆ ಪ್ರಧಾನಿ ಮೋದಿಗೆ ರುಪ್ಸಾ ಮನವಿ
ಶಿಕ್ಷಣ ಸಚಿವರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ವಿಚಾರಲ್ಲಿ ಫೇಲ್ ಆಗಿದ್ದಾರೆ.
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಲಂಚದ ವ್ಯಾಪ್ತಿ ಶೇ.40-50 ರಷ್ಟು ಹೆಚ್ಚಾಗಿದೆ. ಡಿಡಿಪಿಐಗಳು ನೇರವಾಗಿ ಲಂಚ ಕೇಳುತ್ತಿದ್ದಾರೆ. ಇದರ ಆಡಿಯೋ ರೆಕಾರ್ಡ್ ಸಹ ಇದೆ. ಡಿಡಿಪಿಐಗೆ 20 %, ಬಿಇಒಗೆ 25% ಅಂತ ಕಮಿಷನ್ ತಗೋತಾರೆ. ಇಲಾಖೆಯ ಬಹುತೇಕ ಕೆಲಸಗಳಿಗೆ ಆನ್ ಲೈನ್ ವ್ಯವಸ್ಥೆ ಇಲ್ಲ. ಆನ್ ಲೈನ್ ವ್ಯವಸ್ಥೆ ತನ್ನಿ ಅಂದ್ರೂ ಅಧಿಕಾರಿಗಳು ಸುಮ್ಮನಿದ್ದಾರೆ. ಆನ್ ಲೈನ್ ವ್ಯವಸ್ಥೆ ಇಲ್ಲದೆ ಅಧಿಕಾರಿಗಳು ಲಂಚ ಬಾಕರಾಗುತ್ತಿದ್ದಾರೆ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದರು. ಶಿಕ್ಷಣ ಇಲಾಖೆಯ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟದಿಂದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಗೆ ಪತ್ರ:
ಈ ಕುರಿತಾಗಿ ರುಪ್ಸಾ ಸಂಘಟನೆ 8 ಅಂಶಗಳನ್ನ ಉಲ್ಲೇಖ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಆರ್.ಆರ್ ನೀಡಲು ಲಕ್ಷಾಂತರ ರೂ. ಲಂಚ ಪಡೆಯುತ್ತಿರೊ ಆರೋಪ ಮಾಡಿದ್ದು, ಪ್ರತೀ 10 ವರ್ಷಕ್ಕೊಮ್ಮ ಮಾನ್ಯತೆ ನವೀಕರಣ ಅಂತ ಹೈಕೋರ್ಟ್ ಹೇಳಿದೆ. ಆದ್ರೆ ಪ್ರತಿ ವರ್ಷವೂ ಆರ್.ಆರ್ ಒಡೆಯಬೇಕೆಂದು ಶಿಕ್ಷಣ ಇಲಾಖೆ ಹೇಳ್ತಿದೆ. 2020ರಿಂದ ಕಳೆದ 2 ವರ್ಷದಿಂದ ಲಂಚ ಪಡೆಯುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಶಿಕ್ಷಣ ಸಚಿವ ನಾಗೇಶ್ ವಜಾಗೊಳಿಸುವಂತೆ ಪ್ರಧಾನಿಗೆ ಮನವಿ
ಶಿಕ್ಷಣ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಲಂಚ ಫಿಕ್ಸ್ ಆಗಿದೆ. ಶೇ. 30 ರಿಂದ 50ವರೆಗೆ ಲಂಚ ಕೊಡಲೇಬೇಕು. ಲಂಚ ಇಲ್ಲದೆ ಶಿಕ್ಷಣ ಅಧಿಕಾರಿಗಳು ಯಾವುದೇ ಕೆಲಸ ಮಾಡೊಲ್ಲ. ಶಿಕ್ಷಣ ಸಚಿವರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಈ ವಿಚಾರಲ್ಲಿ ಫೇಲ್ ಆಗಿದ್ದಾರೆ. ಶಿಕ್ಷಣ ಸಚಿವ ನಾಗೇಶ್ ವಜಾಗೊಳಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದು, ಕೂಡಲೇ ಸಂಪುಟದಿಂದ ಶಿಕ್ಷಣ ಸಚಿವರನ್ನ ಕೈಬಿಡುವಂತೆ ಆಗ್ರಹಿಸಲಾಗಿದೆ.
ಇದು ಮೂರನೇ ಬಾರಿ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ. ವಜಾಗೊಳಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಎಚ್ಚರಿಕೆ ನೀಡಿದರು. ಶೋಕಿ ಮಾಡೋರನ್ನ ಶಿಕ್ಷಣ ಸಚಿವರನ್ನಾಗಿ ಮಾಡ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಲೋಕೇಶ್ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.