ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು
ಬೆಂಗಳೂರಿನ ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನವಜಾತ ತ್ರಿವಳಿ ಶಿಶುಗಳು ಜನಿಸಿದ ಕೂಡಲೇ ಮೃತಪಟ್ಟಿವೆ. ಪೋಷಕರ ನಿರ್ಲಕ್ಷ್ಯ ಮತ್ತು ಸೂಕ್ತ ವೈದ್ಯಕೀಯ ತಪಾಸಣೆ ಕೊರತೆಯಿಂದ ಘಟನೆ ಸಂಭವಿಸಿದೆ. ಗರ್ಭಿಣಿ ತಾಯಿ ಸರಿಯಾದ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಆರ್ಥಿಕ ಸಮಸ್ಯೆ ಮತ್ತು ಕುಟುಂಬ ಕಲಹ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.

ಆನೇಕಲ್, ಸೆಪ್ಟೆಂಬರ್ 23: ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಪೋಷಕರ ನಿರ್ಲಕ್ಷ್ಯ ಮತ್ತು ಸೂಕ್ತ ತಪಾಸಣೆ, ಪೋಷಣೆ ಕೊರತೆಯಿಂದ ಮೂರು ನವಜಾತ ಶಿಶುಗಳು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಶಿಶುಗಳು ಆನಂದ ಮತ್ತು ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಎಂಬುದು ತಿಳಿದುಬಂದಿದೆ. ಪ್ರೀತಿಸಿ ವಿವಾಹವಾದ ಈ ದಂಪತಿ ಕುಟುಂಬದವರಿಂದ ದೂರವಾಗಿ ವಾಸ ಮಾಡುತ್ತಿತ್ತು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಆನಂದ ಮತ್ತು ಮಂಜುಳಾ ದಂಪತಿ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಇದಾದ ಸ್ವಲ್ಪ ದಿನಗಳ ನಂತರ ಅಣ್ಣನ ಜತೆ ಗಲಾಟೆ ಮಾಡಿಕೊಂಡು ಆನಂದ ದಂಪತಿ ಮನೆ ಬಿಟ್ಟಿದ್ದರು.
ಗರ್ಭಿಣಿಯಾಗಿದ್ದಾಗ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳದ ಯುವತಿ
ಏಪ್ರಿಲ್‌ನಲ್ಲಿ ಮಂಜುಳಾ ತಾಯಿ ಕಾರ್ಡ್ ಮಾಡಿಸಿಕೊಂಡಿದ್ದರು. ಆದರೆ ಕುಟುಂಬ ಕಲಹ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಿಣಿಯಾಗಿದ್ದ ಅವಧಿಯಲ್ಲಿ ಅಗತ್ಯ ತಪಾಸಣೆಗಳಿಗೆ ಹೋಗಿರಲಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯ ಆಶಾ ಕಾರ್ಯಕರ್ತೆಯರು ಹಲವು ಬಾರಿ ತಪಾಸಣೆಗೆ ಕರೆಸಿದ್ದರೂ, ತಪಾಸಣೆ ಮಾಡಿಕೊಂಡಿದ್ದಾಗಿ ತಿಳಿಸಿ ದಂಪತಿ ನುಣುಚಿಕೊಂಡಿದ್ದರು.
ಹುಟ್ಟಿದ ತ್ರಿವಳಿ ಶಿಶುಗಳೂ ಸಾವು!
ಕಳೆದ ಶನಿವಾರ ಮಂಜುಳಾಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಹೆರಿಗೆ ಮಾಡಿಸಲಾಗಿತ್ತು. ತ್ರಿವಳಿ ಶಿಶುಗಳು ಜನಿಸಿದ್ದವು. ದುರದೃಷ್ಟವಶಾತ್, ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ಮೂರು ಶಿಶುಗಳೂ ಮೃತಪಟ್ಟಿವೆ. ತಕ್ಷಣವೇ ಸ್ಥಳೀಯರು ಮಂಜುಳಾರನ್ನು ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿದ ನಂತರ ಮಂಜುಳಾರನ್ನು ಅಲ್ಲಿ ದಾಖಲಿಸಲಾಗಿತ್ತು. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಇದನ್ನೂ ಓದಿ: ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಕರ್ನಟಕದಲ್ಲಿ ಗರ್ಭಿಣಿಯರ ನಿಯಮಿತ ತಪಾಸಣೆ, ಶಿಶು ಜನನದ ನಂತರ ದಾಖಲೆಗಳ ಸಂಯೋಜನೆ ಸಮಸ್ಯೆ ಇರುವ ಬಗ್ಗೆ ಆರೋಗ್ಯ ಇಲಾಖೆ ಕೂಡ ಇತ್ತೀಚೆಗೆ ಒಪ್ಪಿಕೊಂಡಿತ್ತು. ಇದೇ ಕಾರಣದಿಂದ, ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ ಇದ್ದರೂ ಸುಮಾರು 20 ಸಾವಿರ ಶಿಶುಗಳಿಗಷ್ಟೇ ಚಿಕಿತ್ಸೆ ದೊರೆಯುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿತ್ತು. ಇದೀಗ ಸೂಕ್ತ ಚಿಕಿತ್ಸೆಮ ಆರೈಕೆ ಪಡೆಯದ ಕಾರಣ ಆನೇಕಲ್ನಲ್ಲಿ ನವಜಾತ ತ್ರಿವಳಿ ಶಿಶುಗಳು ಸಾವನ್ನಪ್ಪಿವೆ.



