ಶಾಂತಿ ಭಂಗ ಮಾಡುವ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ಆಗುತ್ತೆ; ಮತ್ತೆ ಪುನರುಚ್ಚರಿಸಿದ ಪ್ರಿಯಾಂಕ್ ಖರ್ಗೆ
ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ಆಗುತ್ತೆ ಎಂದು ಬೆಂಗಳೂರು ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು: ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ, ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಇತ್ತೀಚೆಗೆ ಪ್ರಿಯಾಂಕ್ ಖರ್ಗೆ(Priyank kharge) ಎಚ್ಚರಿಕೆ ನೀಡಿದ್ದರು. ಆದ್ರೆ ಈಗ ಇದನ್ನೇ ಮತ್ತೊಮ್ಮೆ ಪುನರುಚ್ಚಾರಣೆ ಮಾಡಿದ್ದಾರೆ. ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆಯಾದ್ರೂ ಕಾನೂನು ಕ್ರಮ ಆಗುತ್ತೆ ಎಂದು ಬೆಂಗಳೂರು ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ನಾನು ಮತ್ತೊಮ್ಮೆ ಪುನರುಚ್ಚಾರಣೆ ಮಾಡ್ತೇನೆ. ಶಾಂತಿ ಭಂಗ ಮಾಡುವ XYZ ಯಾವುದೇ ಸಂಘಟನೆ ಆದರೂ ಕ್ರಮ ಆಗಲಿದೆ. ತಾಕತ್ತು ಇದ್ದರೆ ಬ್ಯಾನ್ ಮಾಡಿ ಎಂದು ಬಿಜೆಪಿಯವರು ಹೇಳ್ತಾರೆ. ಬಿಜೆಪಿಯವ್ರಿಗೆ ತಾಕತ್ತಿದ್ರೆ ಕಾನೂನು ಉಲ್ಲಂಘಿಸಲಿ. ಬಾಬಾ ಅಂಬೇಡ್ಕರ್ ಅವರ ಸಂವಿಧಾನ ಏನು ಅಂತ ನಾವು ತೋರಿಸ್ತೀವಿ. ಬಿಜೆಪಿಯವ್ರು ಯಾಕೆ ಸಂವಿಧಾನ ಪಾಲನೆ ಮಾಡ್ತೀವಿ ಅಂತ ಹೇಳಲ್ಲ. ಬಿಜೆಪಿಯವರು ವಿವೇಕತನ ಇಲ್ಲದೆಯೇ ಮಾತನಾಡ್ತಾ ಇದ್ದಾರೆ. ಯಾವುದಾದರೂ ಸರ್ಕಾರದ ಯೋಜನೆಗಳು ಮಾನದಂಡ ಇಲ್ಲದೆಯೇ ನಡೆಯುತ್ತದೆಯಾ? ಅಷ್ಟೂ ಕೂಡ ವಿವೇಕ ಬಿಜೆಪಿಯವರಿಗೆ ಇಲ್ವಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನೆಮ್ಮದಿ, ಶಾಂತಿ ಕೆಡಿಸಿದ್ರೆ ಆರ್‌ಎಸ್‌ಎಸ್, ಭಜರಂಗದಳ ಯಾವ ಸಂಘಟನೆಯೆಂದು ನೋಡದೇ ಕ್ರಮ ಕೈಗೊಳ್ಳುತ್ತೇವೆ -ಪ್ರಿಯಾಂಕ್ ಖರ್ಗೆ
5 ಗ್ಯಾರಂಟಿಗಳ ವಿಚಾರವಾಗಿ ನಾವು ನುಡಿದಂತೆ ನಡೆಯುತ್ತೇವೆ
ಇನ್ನು ಇದೇ ವೇಳೆ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನಾವು ಕೊಟ್ಟ 600 ಭರವಸೆಗಳಲ್ಲಿ 50 ಅಷ್ಟೇ ಫುಲ್ ಫಿಲ್ ಮಾಡಿದ್ದೀವಿ ಅಂತ ಅವರೇ ಹೇಳಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಾ? ಐದು ಗ್ಯಾರೆಂಟಿಗಳ ಬಗ್ಗೆ ನಾವು ನುಡಿದಂತೆ ನಡೆಯುತ್ತೇವೆ. ಬಿಜೆಪಿಯವರಿಗೆ ಯಾಕಿಷ್ಟು ಆತಂಕ ಗೊತ್ತಾಗುತ್ತಿಲ್ಲ. ಮತದಾರರೇ ಹೇಳ್ತಿದ್ದಾರೆ ಗ್ಯಾರೆಂಟಿಗಳ ಜಾರಿಗೆ ಸಮಯ ಬೇಕು ಅಂತ. ಸರ್ಕಾರ ಬಂದು ಹದಿನೈದು ದಿನ ಆಗಿದೆ ಅಷ್ಟೆ. ಗ್ಯಾರೆಂಟಿಗಳ ಬಗ್ಗೆ ಮಾನದಂಡ ಯಾಕೆ ಎನ್ನುವುದು ಬಿಜೆಪಿಯವರ ಅವಿವೇಕಿತನ. ಮಾನದಂಡಗಳಿಲ್ಲದೆ ಯಾವ ಯೋಜನೆ ರೂಪಿಸೋಕೆ ಆಗುತ್ತೆ. ಪಾಲಿಸಿ ಮ್ಯಾಟರ್ ಅಂದ್ರೆ ಗೊತ್ತಾ ಅವರಿಗೆ. ಕೇಂದ್ರ ಸರ್ಕಾರ ಮತ್ತೆ ಎಲ್ಲರಿಗೂ ಸಾಲ ಮನ್ನಾ ಮಾಡಲು ಆಗುತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಮೊದಲ ಕ್ಯಾಬಿನೆಟ್ ನಲ್ಲಿ ತಾತ್ವಿಕ ಒಪ್ಪಿಗೆ ಪಡೆದಿದ್ದೇವೆ. 34 ಸಚಿವರ ಆಯ್ಕೆ ಮಾಡುವ ಮೂಲಕ ಭರ್ತಿಯಾಗಿದೆ. ಬಿಜೆಪಿಯವರಿಗೆ ಅವರ ವಿರೋಧ ಪಕ್ಷದ ನಾಯಕ ಯಾರು ಇನ್ನೂ ಗೊತ್ತಿಲ್ಲ. ಮೊದಲು ಅವರ ವಿಪಕ್ಷ ನಾಯಕ ಯಾರು ಅಂತ ಗುರುತಿಸಿಕೊಳ್ಳಳ್ಳಿ ಆ ಮೇಲೆ ನಮ್ಮ ಬಗ್ಗೆ ಮಾತಾಡಲಿ ಎಂದರು.
ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಇನ್ನು ಮತ್ತೊಂದೆಡೆ ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ರಿ ಯಾವಾಗ ಮಾಡ್ತೀರಿ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದ್ದು ಬ್ಯಾನ್ ಮಾಡೋದು ಅಂತಾ ತರಾತುರಿ ಏನಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯಪ್ರವೇಶಿಸಿ, ‘ಅಲ್ಲ ಸರ್ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೀವಿ ಅಂದ್ರೆ ಗದ್ದಲ ಮಾಡಿದ್ರೆ ಅಷ್ಟೇ, ಬಂದ್ ಮಾಡ್ತೀವಿ ಅಂತಾ ಎಲ್ಲೂ ಹೇಳಿಲ್ಲ’ ಎಂದರು. ಉದಾಹರಣೆ ಕೊಟ್ಟಿದ್ದೀವಿ ಅಷ್ಟೇ, ಆರ್‌ಎಸ್‌ಎಸ್ ಉದಾಹರಣೆ ಕೊಟ್ಟಿದ್ದೀವಿ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ಬಂದ್ ಮಾಡ್ತೀವಿ ಅಂತಾ ಎಲ್ಲೂ ಹೇಳಿಲ್ಲ ಎಂದರು.
ಮೌಢ್ಯ ನಿಷೇಧ ಕಾಯ್ದೆ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ್ದು ಮೌಢ್ಯ ನಿಷೇಧ ಕಾಯ್ದೆ ನಾವು ಬರುವ ಮುಂಚೆಯೇ ಇದೆ, ಈಗ ಮತ್ತೆ ಅದನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:11 pm, Sun, 28 May 23