ಬೆಂಗಳೂರು: ಹಿಜಾಬ್(Hijab) ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕರ್ನಾಟಕದ ಪೊಲೀಸರು ಆರೋಪಿಯನ್ನು ಕರೆತಂದಿದ್ದಾರೆ. ಬಾಡಿ ವಾರೆಂಟ್ ಮೂಲಕ ರಹಮತ್ ಉಲ್ಲಾನನ್ನು ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಪೊಲೀಸರು ಇದಕ್ಕೆ ಸಹಕಾರ ನೀಡಿದ್ದಾರೆ. ಆರೋಪಿಯನ್ನ ನ್ಯಾಯಾಲಯ 8 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಜಡ್ಜ್ ಬಗ್ಗೆ ಆಗಿರುವ ಬೆದರಿಕೆ ಇಲ್ಲಿಗೆ ಕೊನೆಯಾಗಬೇಕು. ಹಾಗಾಗಿ ಪೊಲೀಸರು ವಿಶೇಷವಾಗಿ ಗಮನಿಸುತ್ತಿದ್ದಾರೆ. ಬೆಂಗಳೂರು ಕಮಿಷನರ್ ನೇತೃತ್ವದಲ್ಲಿ ವಿಚಾರಣೆ ಆಗ್ತಿದೆ. ನ್ಯಾಯಾಂಗದ ಗೌರವ ಹಾಳು ಮಾಡುವ ಪ್ರಯತ್ನ ಇದು ಎಂದಿದ್ದಾರೆ. ರಹಮತ್ ಉಲ್ಲಾ ಎಂಬ ಓರ್ವನನ್ನು ಕರೆತರಲಾಗಿದೆ. ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಹೋಗಬೇಕು. ಮತೀಯ ಸಂಘಟನೆ ಭೇದಿಸುವ ಪ್ರಯತ್ನ ಪೊಲೀಸರು ಮಾಡುತ್ತಿದ್ದಾರೆ. ಬೆಂಗಳೂರಿಗೆ ಆರೋಪಿ ಕರೆತಂದ ಪೊಲೀಸರು 37 ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 8 ದಿನ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ತಮಿಳುನಾಡು ತಾಬೇದ್ ಜಮಾತ್ ಸಂಘಟನೆಗೆ ಸೇರಿದ್ದ ಆರೋಪಿ ರೆಹಮತ್ ಉಲ್ಲಾ ತಮಿಳುನಾಡಿನ ತಿರುಪತ್ತೂರ್ ಜೈಲಿನಲ್ಲಿದ್ದ. ಕಳೆದ ಗುರುವಾರ ಮಧುರೈನಲ್ಲಿ ನಡೆದ ಭಾಷಣದಲ್ಲಿ ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ. ಸದ್ಯ ಬಾಡಿ ವಾರಂಟ್ ಪಡೆದು ಬೆಂಗಳೂರು ಪೊಲೀಸರು ತಮಿಳುನಾಡಿಗೆ ಹೋಗಿ ಆರೋಪಿ ಕರೆತಂದಿದ್ದಾರೆ.
ಇನ್ನು ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ರೆಹಮತ್ ಉಲ್ಲಾ ವಿಚಾರಣೆ ನಡೆಸಲಿದ್ದಾರೆ. ವಕೀಲೆ ಸುಧಾಕಾಟ್ವಾ ನೀಡಿದ್ದ ದೂರಿನ ಅಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ತಮಿಳು ಭಾಷೆ ಬಳಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಡತನವನ್ನೇ ಸವಾಲಾಗಿ ಸ್ವೀಕರಿಸಿದ ಮಹಾದೇವಸ್ವಾಮಿ 14 ಚಿನ್ನದ ಪದಕ ಪಡೆದರೆ, ಭಾವನಾ 19 ಪದಕಗಳನ್ನು ತಮ್ಮವಾಗಿಸಿಕೊಂಡರು
Published On - 9:45 pm, Tue, 22 March 22