ಅತ್ತಿಬೆಲೆ ಅಗ್ನಿ ದುರಂತ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಅತ್ತಿಬೆಲೆ ಪಟಾಕಿ ಗೋದಾಮಿಯಲ್ಲಿ ಅಗ್ನಿ ದುರಂತ ಸಂಭವಿಸಿ 16 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ವಿಚಾರಣಾಧಿಕಾರಿಯಾಗಿ ಅಮಲಾನ್ ಆದಿತ್ಯಾ ಬಿಸ್ವಾಸ್ ಅವರನ್ನು ನೇಮಿಸಿದೆ.
ಬೆಂಗಳೂರು, ಅ.17: ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋದಾಮಿಯಲ್ಲಿ ಅಗ್ನಿ ದುರಂತ (Fire Accident) ಸಂಭವಿಸಿ 16 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ವಿಚಾರಣಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯಾ ಬಿಸ್ವಾಸ್ ಅವರನ್ನು ನೇಮಿಸಿದೆ.
ಅಗ್ನಿ ದುರಂತ ಪ್ರಕರಣ ಸಂಬಂಧ ಮೂರು ತಿಂಗಳ ಒಳಗಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಚಾರಣಾಧಿಕಾರಿ ಆದಿತ್ಯಾ ಬಿಸ್ವಾಸ್ ಅವರಿಗೆ ಸರ್ಕಾರ ಸೂಚನೆ ನೀಡಿದೆ. ಅಕ್ಟೋಬರ್ 7 ರಂದು ಸಂಜೆ 3:30 ರ ವೇಳೆಗೆ ಗೋಡೌನ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ, ಪಟಾಕಿ ಖರೀದಿಸಲು ಹೋಗಿ ದುರಂತ ಅಂತ್ಯಕಂಡ
ಅಗ್ನಿ ದುರಂತದಲ್ಲಿ 16 ಮಂದಿ ಕಾರ್ಮಿಕರು ಮೃತರಾಗಿದ್ದರು, ಈ ಪೈಕಿ 14 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಳಿದ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಘಟನೆ ಸಂಬಂಧ ಶ್ರೀ ಬಾಲಜಿ ಟ್ರೇಡರ್ಸ್ ಪಟಾಕಿ ಮಳಿಗೆ ಮಾಲೀಕ ರಾಮಸ್ವಾಮಿ ರೆಡ್ಡಿ, ನವೀನ್ ರೆಡ್ಡಿ ಬಂಧಿಸಲಾಗಿತ್ತು.
ಪ್ರಕರಣ ಸಂಬಂಧ ಜಾಗದ ಮಾಲೀಕ ಅನಿಲ್ ರೆಡ್ಡಿ ಸೇರಿದಂತೆ ಇತರರ ವಿರುದ್ದ FIR ದಾಖಲಾಗಿತ್ತು. ಸದ್ಯ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಿದ್ದು, ತನಿಖೆ ವೇಳೆ ಪಟಾಕಿ ಗೋದಾಮಿಗೆ ಪರವಾನಗಿ ನೀಡಲಾಗಿದೆಯಾ? ಪರವಾನಗಿ ನೀಡುವಿಕೆಯಲ್ಲಿ ಲೋಪವಾಗಿದೆಯಾ ಆಕಸ್ಮಿಕವಾಗಿ ಅವಘಡ ನಡೆದಿದೆಯಾ ಅಥವಾ ನಿರ್ಲಕ್ಷ್ಯದಿಂದ ನಡೆದಿದೆಯೇ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ