ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ದಯಾನಂದ ನೇಮಕ
ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ರಾಜ್ಯ ಮೇಜರ್ ಸರ್ಜರಿ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹಾಗೂ ವಿಶೇಷ ಕಮಿಷನರ್ ವರ್ಗಾವಣೆ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ(bengaluru city police commissioner) ಬಿ. ದಯಾನಂದ (B Dayananda) ಅವರನ್ನು ನೇಮಕ ಮಾಡಲಾಗಿದೆ. ಈಗಿದ್ದ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ (Pratap Reddy) ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ಬೆಂಗಳೂರು ನಗರದ ‘ವಿಶೇಷ ಕಮಿಷನರ್’ (ಸಂಚಾರ) ಎಂಎ ಸಲೀಂ ಅವರನ್ನು ಸಿಐಡಿ ಡಿಜಿಯಾಗಿ ವರ್ಗಾವಣೆ ಮಾಡಲಾಗಿದೆ.
ವರ್ಷದ ಹಿಂದೆಯಷ್ಟೇ (2022) ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಪ್ರತಾಪ್ ರೆಡ್ಡಿ ಅವರಿಗೆ ಈ ವರ್ಷದ(2023) ಆರಂಭದಲ್ಲಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಅಲ್ಲಿಯೇ ಮುಂದುವರೆಸಲಾಗಿತ್ತು. ಆದ್ರೆ, ಇದೀಗ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಇವರ ಸ್ಥಾನಕ್ಕೆ 1994 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬಿ ದಯಾನಂದ್ ಅವರನ್ನು ನೇಮಕ ಮಾಡಲಾಗಿದೆ.
ದಯಾನಂದ ಈ ಹಿಂದೆ ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿರುವ ಬಿ.ದಯಾನಂದ ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು ಮೂಲದವರಾಗಿದ್ದಾರೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ತವರು ಜಿಲ್ಲೆ ದಯಾನಂದ ಅವರನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿದ್ದವು. ಬಿ.ದಯಾನಂದ್ (B Dayanand) ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿತ್ತು. ಹೀಗಾಗಿ ಕನ್ನಡಿದ ಐಪಿಎಸ್ ಅಧಿಕಾರಿಗೆ ಈ ಬಾರಿ ಬೆಂಗಳೂರು ಪೊಲೀಸ್ ಕಮಿಷನರ್ (Police commissioner) ಹುದ್ದೆ ಒಲಿಯುವುದು ಪಕ್ಕಾ ಎನ್ನಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಪ್ರತಾಪ್ ರೆಡ್ಡಿ ಅವರನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕನ್ನಡಿಗ ದಯಾನಂದ ಅವರಿಗೆ ಬೆಂಗಳೂರು ಕಮಿಷನರ್ ಹುದ್ದೆ ಒಲಿದುಬಂದಿದೆ.
Published On - 12:26 pm, Tue, 30 May 23