AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ, ದಂಧೆಗೆ ವೈದ್ಯರೇ ಸಾಥ್

ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರೇ ಸಾಥ್ ನೀಡುತ್ತಿದ್ದು, ಇದೀಗ ಪೊಲೀಸರು ವೈದ್ಯರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬಂದಿದ್ದೇಗೆ? ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ? ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ, ದಂಧೆಗೆ ವೈದ್ಯರೇ ಸಾಥ್
ಪ್ರಾತಿನಿಧಿಕ ಚಿತ್ರ
ಜಗದೀಶ ಬಿ.
| Edited By: |

Updated on: Oct 25, 2023 | 8:33 AM

Share

ಬೆಂಗಳೂರು(ಅ.25): ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ (Bengaluru) ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು. ಈ ದಂಧೆಯಲ್ಲಿ ವೈದ್ಯರು ಸಹ ಇದ್ದು, 15 ರಿಂದ 20 ಸಾವಿರ ರೂಪಾಯಿ ಪಡೆದುಕೊಂಡು ಈ ದಂಧೆಗೆ ಸಾಥ್ ನೀಡುತ್ತಿದ್ದರು.

ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್‌ ಎಂ.ಪ್ರಶಾಂತ್ ಅವರು, ಕೂಡಲೇ ಪಿಎಸ್‌ಐ ಮಂಜುನಾಥ್‌, ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಮಂಜುನಾಥ್, ಎಎಸ್‌ಐಗಳಾದ ಗೋವಿಂದರಾಜು, ನಾಗಯ್ಯ ಒಳಗೊಂಡ ತಂಡ ರಚಿಸಿಕೊಂಡು ದಂಧೆಕೋರರ ಬೆನ್ನುಹತ್ತಿದ್ದಾಗ ಆರೋಪಿಗಳು ಖಾಕಿ ಬಲೆಗೆ ಬಿದ್ದಿದ್ದಾರೆ.

ಆರೋಪಿಗಳು ಸೆರೆ ಸಿಕ್ಕಿದ್ದೇಗೆ?

ಇತ್ತೀಚೆಗೆ ಹಳೇ ಮದ್ರಾಸ್‌ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಪಿಐ ಪ್ರಶಾಂತ್ ತಂಡಕ್ಕೆ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಹಳೇ ಮದ್ರಾಸ್‌ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು, ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಕೂಡಲೇ ಆ ಕಾರನ್ನು ಬೈಕ್‌ಗಳಲ್ಲಿ ಸ್ಪಲ್ಪದೂರ ಬೆನ್ನಹತ್ತಿ ಹೋಗಿ ತಡೆದಿದ್ದಾರೆ. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.

ಬಳಿಕ ಈ ಆರೋಪಿಗಳ ಮಾಹಿತಿ ಆಧರಿಸಿ ಮಂಡ್ಯ-ಪಾಂಡಪುರ ರಸ್ತೆಯಲ್ಲಿದ್ದ ಅಲೆಮನೆ ಮೇಲೆ ಪೊಲೀಸರು ಕ್ಷಿಪ್ರ ದಾಳಿ ನಡೆಸಿದಾಗ ಇನ್ನುಳಿದ್ದಿಬ್ಬರು ಸೆರೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ದಂಧೆಕೋರರ ಅಡ್ಡೆಯಾದ ಪಾಂಡಪುರ ರಸ್ತೆಯ ಅಲೆಮನೆ ಮೇಲೆ ದಾಳಿ ನಡೆಸಿದಾಗ ಐದಕ್ಕೂ ಹೆಚ್ಚಿನ ಗರ್ಭೀಣಿಯರು ಪತ್ತೆಯಾಗಿದ್ದಾರೆ. ಆ ಮಹಿಳೆಯರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆಗೆ ಕೆಲ ವೈದ್ಯರು ಸಹ ಸಾಥ್ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ದಂಧೆಕೋರ ವೀರೇಶ್‌ನ ಚಿಕ್ಕಪ್ಪ ಡಾ। ಮಲ್ಲಿಕಾರ್ಜುನ್ ಸೇರಿದಂತೆ ಕೆಲವು ವೈದ್ಯರಿಗೆ ಹುಡುಕಾಟ ನಡೆದಿದೆ. ಇನ್ನು ಕಳೆದ ವರ್ಷದ ಸಹ ಇದೇ ರೀತಿಯ ಪ್ರಕರಣದಲ್ಲಿ ಡಾ। ಮಲ್ಲಿಕಾರ್ಜುನ್ ಬಂಧಿತನಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಆತ ಚಾಳಿ ಮುಂದುವರೆಸಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More