Bangalore Accident; ಬೆಂಗಳೂರು; ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್ ಹರಿದು ಮಗು ಸಾವು
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೂರ್ವಿ ರಾವ್ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿಯಾಗಿದ್ದಾರೆ. ಪ್ರತಿನಿತ್ಯ ಪ್ರಸನ್ನ ಅವರೇ ಮಗಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು.
ಬೆಂಗಳೂರು, ಆಗಸ್ಟ್ 16: ಬಿಎಂಟಿಸಿ ಬಸ್ (BMTC Bus) ಹರಿದು ನಾಲ್ಕು ವರ್ಷ ವಯಸ್ಸಿನ ಮಗು ಮೃತಪಟ್ಟ ಘಟನೆ ಬೆಂಗಳೂರಿನ ಉತ್ತರಹಳ್ಳಿ (Uttarahalli) ಮುಖ್ಯರಸ್ತೆಯಲ್ಲಿ ನಡೆದಿದೆ. ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ಪ್ರಿ ಕೆಜಿ ವಿದ್ಯಾರ್ಥಿನಿ ಪೂರ್ವಿ ರಾವ್ ಮೃತ ದುರ್ದೈವಿ. ಮಗಳನ್ನು ಶಾಲೆಗೆ ಬಿಡಲೆಂದು ಆಕೆಯ ತಂದೆ ಪ್ರಸನ್ನ ಅವರು ಬೈಕ್ನಲ್ಲಿ ಕರೆದೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪ್ರಸನ್ನ ಬೈಕ್ನ ಎಡಬದಿಗೆ ಬಿದ್ದರೆ ಪೂರ್ವಿ ಬೈಕ್ನ ಬಲಬದಿ ಬಿದ್ದಿದ್ದಾಳೆ. ಇದೇ ವೇಳೆ ಬಸ್ ಪೂರ್ವಿ ಮೇಲೆ ಹರಿದುಹೋಗಿದೆ. ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪೂರ್ವಿ ರಾವ್ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿಯಾಗಿದ್ದಾರೆ. ಪ್ರತಿನಿತ್ಯ ಪ್ರಸನ್ನ ಅವರೇ ಮಗಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಇಂದೂ ಕೂಡ ಅದೇ ರೀತಿ ಮಗಳನ್ನು ಶಾಲೆಗೆ ಬಿಡಲು ತೆರಳಿದ್ದಾಗ ಘಟನೆ ಸಂಭವಿಸಿದೆ.
ಮಾರುತಿನಗರ ಮುಖ್ಯರಸ್ತೆಯಲ್ಲಿ ಅಪಘಾತ; ಇಬ್ಬರ ಸಾವು
ಬೆಂಗಳೂರಿನ ಮಾರುತಿನಗರ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೈಕ್ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸರ್ಕಾರಿ ಕಾಲೇಜು ಪ್ರಾಧ್ಯಾಪಕ ನರಸಪ್ಪ (51) ಹಾಗೂ ರಕ್ಷಾ (21) ಎಂಬ ಯುವತಿ ಮೃತಪಟ್ಟಿದ್ದಾರೆ. ರಕ್ಷಾ ಅವರು ತಮ್ಮ ಸ್ನೇಹಿತ ಚಂದನ್ ಜತೆ ಪಲ್ಸರ್ ಬೈಕ್ ನಲ್ಲಿ ವೇಗವಾಗಿ ಬಂದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಅಲ್ಲದೆ, ಚಂದನ್ ಅಜಾಗರೂಕತೆಯ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಇವರಿದ್ದ ಬೈಕ್ ಮತ್ತೊಂದು ಬೈಕ್ನಲ್ಲಿ ಸಾಗುತಿದ್ದ ನರಸಪ್ಪಗೆ ಡಿಕ್ಕಿ ಹೊಡೆದಿದೆ. ನರಸಪ್ಪ ಸಹ ಹೆಲ್ಮೆಟ್ ಧರಿಸಿದ ಬೈಕ್ ನಲ್ಲಿ ತೆರಳುತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಚಾಲಕ, ಇಬ್ಬರು ಸಾವು
ಅಪಘಾತದ ತೀವ್ರತೆಗೆ ನರಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ರಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದರು. ಚಂದನ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Wed, 16 August 23