ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್

ಬೆಂಗಳೂರಿನಲ್ಲಿ ಕೇರಳ ಲಾಟರಿ ಹೆಸರಿನಲ್ಲಿ ಹೊಸ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಇಬ್ಬರು ನಾಗರಿಕರು ₹13.71 ಲಕ್ಷ ಕಳೆದುಕೊಂಡಿದ್ದಾರೆ. ವಂಚಕರು ನಕಲಿ ವೆಬ್‌ಸೈಟ್ ಮತ್ತು ಆರ್‌ಬಿಐ ಪತ್ರಗಳನ್ನು ಬಳಸಿ ಲಾಟರಿ ಬಂದಿದೆ ಎಂದು ನಂಬಿಸಿದ್ದಾರೆ. ಜಿಎಸ್‌ಟಿ, ಟಿಡಿಎಸ್ ಮತ್ತು ಕರೆನ್ಸಿ ಬದಲಾವಣೆ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ. ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದು, ಆನ್‌ಲೈನ್ ಲಾಟರಿ ಆಮಿಷಗಳ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್
ಸಾಂದರ್ಭಿಕ ಚಿತ್ರ

Updated on: Jun 05, 2026 | 12:29 PM

ಬೆಂಗಳೂರು, ಜೂ.5: ಬೆಂಗಳೂರಿನಲ್ಲಿ ದಿನಕ್ಕೊಂದು ಸ್ಕ್ಯಾಮ್​​​​​ಗಳು ನಡೆಯುತ್ತಿರುತ್ತದೆ. ಇದೀಗ ಈ ವಂಚನೆಗೆ ಹೊಸ ರೂಪ ನೀಡಿದ್ದಾರೆ. “ನಿಮಗೆ 8 ಲಕ್ಷ ರೂ. ಕೇರಳ ಲಾಟರಿ ಹೊಡೆದಿದೆ” ಎಂಬ ವಂಚಕರ ನಕಲಿ ಮಾತನ್ನು ನಂಬಿ ಪಶ್ಚಿಮ ಬೆಂಗಳೂರಿನ ಇಬ್ಬರು ನಾಗರಿಕರು ಬರೋಬ್ಬರಿ 13.71 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ವೆಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಂಚನೆಗೊಳಗಾದವರಲ್ಲಿ ವಲಗೇರಹಳ್ಳಿಯ 60 ವರ್ಷದ ಎನ್‌ಜಿಒ (NGO) ಉದ್ಯೋಗಿ ಒಬ್ಬರು 7.45 ಲಕ್ಷ ರೂ. ಕಳೆದುಕೊಂಡಿದ್ದರೆ, ಮಾರುತಿ ನಗರದ 52 ವರ್ಷದ ರೈತರೊಬ್ಬರು 6.26 ಲಕ್ಷ ರೂ. ಕಳೆದುಕೊಂಡು ಕಂಗಾಲಾಗಿದ್ದಾರೆ.

‘ಕೇರಳ ಜಾಕ್‌ಪಾಟ್’ ಅಥವಾ ‘ಕೇರಳ ಸ್ಟೇಟ್ ಲಾಟರಿ’ ಪ್ರತಿನಿಧಿಗಳೆಂದು ಹೇಳಿಕೊಂಡ ಸೈಬರ್ ಕಳ್ಳರು, ಇಬ್ಬರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ 8 ಲಕ್ಷ ರೂ. ಲಾಟರಿ ಬಂದಿದೆ ಎಂದು ನಂಬಿಸಿದ್ದರು. ಲಾಟರಿ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ವಂಚಕರು ‘thekeralajackpotresult.online’ ಎಂಬ ನಕಲಿ ವೆಬ್‌ಸೈಟ್ ಲಿಂಕ್ ಕಳುಹಿಸಿದ್ದರು. ಸಂತ್ರಸ್ತರು ಆ ಲಿಂಕ್ ತೆರೆದಾಗ, ಅವರು ಲಾಟರಿ ಗೆದ್ದಿರುವಂತೆ ವೆಬ್‌ಸೈಟ್‌ನಲ್ಲಿ ನಕಲಿಯಾಗಿ ಎಡಿಟ್ ಮಾಡಿ ತೋರಿಸಲಾಗಿತ್ತು. ನಂಬಿಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಸರಿನ ನಕಲಿ ಪತ್ರಗಳನ್ನೂ ಕಳುಹಿಸಲಾಗಿತ್ತು.

ಹಣ ಬಿಡುಗಡೆ ಮಾಡಲು ಎನ್‌ಜಿಒ ಉದ್ಯೋಗಿಗೆ ಜಿಎಸ್‌ಟಿ (GST), ಟಿಡಿಎಸ್ (TDS) ಮತ್ತು ಆದಾಯ ತೆರಿಗೆ ಪಾವತಿಸುವಂತೆ ವಂಚಕರು ಸೂಚಿಸಿದ್ದರು. ಇತ್ತ ರೈತನಿಗೆ ಜಿಎಸ್‌ಟಿ ಜೊತೆಗೆ ಆರ್‌ಬಿಐನಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯಲು ಹಣ ಕೇಳಿದ್ದರು. ಅಷ್ಟೇ ಅಲ್ಲದೆ, ಲಾಟರಿ ಹಣವು ಥಾಯ್ಲೆಂಡ್‌ನ ‘ಥಾಯ್ ಬಹ್ತ್’ ಕರೆನ್ಸಿಯಲ್ಲಿದೆ, ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಕರೆನ್ಸಿ ಕನ್ವರ್ಷನ್ ಚಾರ್ಜ್ ಬೇಕು ಎಂದು ನಂಬಿಸಿ ಇಬ್ಬರಿಂದಲೂ ಲಕ್ಷಾಂತರ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ತಮಗೆ ಮೋಸ ಹೋಗಿರುವುದು ಇಬ್ಬರಿಗೂ ಅರಿವಾಗಿದೆ.

ಇದನ್ನೂ ಓದಿ: ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ಪ್ರಯಾಣಿಕರ ಗಮನಕ್ಕೆ: ಈ ರೈಲ್ವೆ ಮಾರ್ಗಕ್ಕೆ ಜೂ.15 ರಿಂದ ಹೊಸ ಮುಂಗಾರು ವೇಳಾಪಟ್ಟಿ

ಕರ್ನಾಟಕದಲ್ಲಿ 2007 ರಿಂದಲೇ ಲಾಟರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಕರ್ನಾಟಕದ ನಾಗರಿಕರು ಲಾಟರಿ ಕಾನೂನುಬದ್ಧವಾಗಿರುವ ಕೇರಳದಂತಹ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿ ದೈಹಿಕವಾಗಿ ಟಿಕೆಟ್ ಖರೀದಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಮುಖ್ಯವಾದ ವಿಷಯವೆಂದರೆ, ಕೇರಳ ಸರ್ಕಾರದ ಲಾಟರಿ ಟಿಕೆಟ್‌ಗಳು ಯಾವಾಗಲೂ ಕಾಗದದ ರೂಪದಲ್ಲಿರುತ್ತವೆಯೇ ಹೊರತು, ಅವುಗಳನ್ನು ಎಂದಿಗೂ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುವುದಿಲ್ಲ. ಹೀಗಾಗಿ ಇಂತಹ ಆನ್‌ಲೈನ್ ಲಾಟರಿ ಆಮಿಷಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 12:26 pm, Fri, 5 June 26

Loading...
Unable to load recommendations.
Follow Us