Bangalore Rain: ಬಿರು ಬಿಸಿಲ ಮಧ್ಯೆ ಬೆಂಗಳೂರಿನೆಲ್ಲೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಜನರು ಪರದಾಟ

ಬೆಂಗಳೂರು ಮಳೆ ಹವಾಮಾನ: ಕೆಲ ದಿನಗಳಿಂದ ಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿನ ಜನತೆಗೆ ವರುಣ ಶಾಕ್ ನೀಡಿದ್ದಾನೆ. ಸಂಜೆ ಆಗುತ್ತಿದ್ದಂತೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ. ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

Bangalore Rain: ಬಿರು ಬಿಸಿಲ ಮಧ್ಯೆ ಬೆಂಗಳೂರಿನೆಲ್ಲೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಜನರು ಪರದಾಟ
ಮಳೆ
Image Credit source: tv9 kannada
Edited By:

Updated on: Apr 29, 2026 | 6:02 PM

ಬೆಂಗಳೂರು, ಏಪ್ರಿಲ್​ 29: ಸಿಲಿಕಾನ್ ಸಿಟಿಯಲ್ಲಿ (bangaluru) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನರಿಗೆ ಇದೀಗ ವರುಣ ಶಾಕ್​ ನೀಡಿದ್ದಾನೆ. ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ, ಗುಡುಗು ಸಮೇತ ಧಾರಾಕಾರವಾಗಿ ಆಲಿಕಲ್ಲು ಮಳೆ (Rain) ಸುರಿದಿದೆ. ದಿಢೀರ್ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ಜನರು ಸೇರಿದಂತೆ ವಾಹನ ಸವಾರರು ಪರದಾಡುವಂತಾಗಿದೆ.

ಏಲ್ಲೆಲ್ಲಿ ಮಳೆ?

ಮೆಜೆಸ್ಟಿಕ್, ಮಾರುಕಟ್ಟೆ (ಮಾರ್ಕೆಟ್), ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಗುಟ್ಟಹಳ್ಳಿ, ವಸಂತನಗರ, ಶಾಂತಿನಗರ, ಆರ್.ಟಿ.ನಗರ, ಜಯನಗರ, ಜೆ.ಪಿ‌ ನಗರ, ಹೆಬ್ಬಾಳ, ಶಿವಾಜಿ ನಗರ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಡಬಲ್ ರೋಡ್, ರಿಚ್ಮಂಡ್ ಸರ್ಕಲ್ ಮತ್ತು ವಿಧಾನಸೌಧದ ಸುತ್ತಮುತ್ತ ವರುಣ ಆರ್ಭಟಿಸುತ್ತಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿಂದು ಬಿರುಗಾಳಿಯ ಜೊತೆಗೆ ಆಲಿಕಲ್ಲು ಮಳೆಯ ಅಬ್ಬರ!

ಬಿರು ಬಿಸಿಲ ನಡುವೆ ಆಗಮಿಸಿದ ದಿಢೀರ್ ಮಳೆಗೆ ರಸ್ತೆ ಬದಿ ವ್ಯಾಪಾರಿಗಳು ಪರದಾಡಿದ್ದು, ಫ್ಲೈಓವರ್, ಸ್ಕೈವಾಕ್ ಕೆಳಗೆ ಬೈಕ್ ಸವಾರರು ಆಶ್ರಯ ಪಡೆದಿದ್ದಾರೆ. ತಗ್ಗುಪ್ರದೇಶದ ನಿವಾಸಿಗಳಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದೆ.

ಅಕಾಲಿಕ ಮಳೆ ಅಬ್ಬರಕ್ಕೆ ಹಲವು ಅವಾಂತರ

ಇನ್ನು ಅಕಾಲಿಕ ಮಳೆ ಅಬ್ಬರಕ್ಕೆ ನಗರದಲ್ಲಿ ಕೆಲ ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಗೆ ಕೆಲವೆಡೆ ಬೃಹತ್​ ಮರಗಳು ಧರೆಗುರುಳಿವೆ. ಮರ ಬಿದ್ದು ಶೇಷಾದ್ರಿಪುರಂ-ಮಲ್ಲೇಶ್ವರಂ ರಸ್ತೆ ಬಂದ್ ಆಗಿದೆ. ಗೊರಗುಂಟೆಪಾಳ್ಯದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮರ ಬಿದ್ದ ಹಿನ್ನೆಲೆ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ.

ವಿಧಾನಸೌಧಕ್ಕೂ ನುಗ್ಗಿದ ಮಳೆ ನೀರು

ಇನ್ನು ಭಾರಿ ಮಳೆಯಿಂದ ವಿಧಾನಸೌಧಕ್ಕೂ ಮಳೆ ನೀರು ನುಗ್ಗಿದೆ. ವಿಧಾನಸೌಧ ಮೊದಲ ಮಹಡಿ ಕಾರಿಡಾರ್ ಹಾಗೂ ವಿಪಕ್ಷ ನಾಯಕರ ಕೊಠಡಿಗೂ ಮಳೆ ನೀರು ನುಗ್ಗಿದ್ದು, ಫೈಲ್, ಕಂಪ್ಯೂಟರ್, ಟೇಬಲ್​​ಗಳು ಮಳೆ ನೀರಿಗೆ ಒದ್ದೆಯಾಗಿವೆ. ಜೊತೆಗೆ ಕೆಎಸ್​ಆರ್​ಟಿಸಿ ಆಸ್ಪತ್ರೆಗೂ ಮಳೆ ನೀರು ನುಗ್ಗಿದೆ. ಭಾರಿ ಗಾಳಿಯಿಂದ ಶಿವಾನಂದ ವೃತ್ತದ​ ಬಳಿ ಕ್ರೆಸೆಂಟ್ ರಸ್ತೆಯಲ್ಲಿ ಬೃಹತ್​ ಮರವೊಂದು ಬಿದ್ದ ಹಿನ್ನೆಲೆ 3 ಕಾರು ಮತ್ತು 4 ಬೈಕ್ ಜಖಂಗೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:20 pm, Wed, 29 April 26

Follow Us