ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಪ್ಪಿಸಲು ಬಾಗಿಲು ತೆರೆದಿಟ್ಟು ಮಲಗಿದ್ದ ಮಹಿಳೆಗೆ ಕಾದಿತ್ತು ಶಾಕ್!

ಬೆಂಗಳೂರಿನಲ್ಲಿ ಬೇಸಿಗೆಯ ಶಾಖದಿಂದಾಗಿ ಮುಖ್ಯ ಬಾಗಿಲು ತೆರೆದಿಟ್ಟಿದ್ದ ಮಹಿಳೆಯೊಬ್ಬರ ಮನೆಯಲ್ಲಿ ₹1.5 ಲಕ್ಷ ಮೌಲ್ಯದ ಮಾಂಗಲ್ಯ ಸರ, ಮೊಬೈಲ್‌ಗಳು ಕಳುವಾಗಿವೆ. ಅಶೋಕನಗರದಲ್ಲಿ ನಡೆದ ಈ ಘಟನೆ ಮನೆಯ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸಿದೆ. ರಾತ್ರಿ ವೇಳೆ ಬಾಗಿಲು ಲಾಕ್ ಮಾಡುವಂತೆ, ಗ್ರಿಲ್‌ಗಳನ್ನು ಅಳವಡಿಸುವಂತೆ ಮತ್ತು ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಪ್ಪಿಸಲು ಬಾಗಿಲು ತೆರೆದಿಟ್ಟು ಮಲಗಿದ್ದ ಮಹಿಳೆಗೆ ಕಾದಿತ್ತು ಶಾಕ್!
ಸಾಂದರ್ಭಿಕ ಚಿತ್ರ
Image Credit source: Tv9 kannada

Updated on: Apr 08, 2026 | 10:31 AM

ಬೆಂಗಳೂರು, ಏ.8: ನಗರದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಶಾಖದಿಂದ ಪಾರಾಗಲು ಮನೆಯ ಮುಖ್ಯ ಬಾಗಿಲನ್ನು ತೆರೆದಿಟ್ಟಿದ್ದೇ ಮಹಿಳೆಯೊಬ್ಬರಿಗೆ ಮುಳುವಾಗಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮಾಂಗಲ್ಯ ಸರ ಮತ್ತು ಮೊಬೈಲ್‌ಗಳನ್ನು ದೋಚಿದ್ದಾರೆ.

ಅಶೋಕನಗರದ ನಿವಾಸಿ ಶೈಲಜಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಮನೆಯೊಳಗೆ ಗಾಳಿ ಬರಲಿ ಎಂಬ ಕಾರಣಕ್ಕೆ ಮುಖ್ಯ ಬಾಗಿಲನ್ನು ತೆರೆದಿಟ್ಟು ಗಾಢ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು ಮನೆಯೊಳಗೆ ನುಗ್ಗಿ, ಅವರ ಪಕ್ಕದಲ್ಲೇ ಇದ್ದ 18 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಅಪಹರಿಸಿದ್ದಾರೆ. ಕಳುವಾದ ಒಟ್ಟು ಮೌಲ್ಯ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬೆಳಿಗ್ಗೆ 6 ಗಂಟೆಗೆ ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ 2:25ರ ಸುಮಾರಿಗೆ ಬರಿಗಾಲಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲು ಸಾಲು ಮನೆಗಳ ಬಾಗಿಲನ್ನು ತಳ್ಳುತ್ತಿರುವುದು ಕಂಡುಬಂದಿದೆ. ಶೈಲಜಾ ಅವರ ಮನೆಯ ಬಾಗಿಲು ತೆರೆದಿದ್ದರಿಂದ ಸುಲಭವಾಗಿ ಒಳನುಗ್ಗಿ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಎಫ್‌ಐಆರ್ (FIR) ದಾಖಲಿಸಲು ಪೊಲೀಸರು ಒಂದು ದಿನ ಇಡೀ ಕಾಯುವಂತೆ ಮಾಡಿದರು ಎಂದು ಶೈಲಜಾ ಅವರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಲಜಾ ಅವರು ಈ ಹಿಂದೆ ಸ್ಕಿನ್‌ಕೇರ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಆರೋಗ್ಯದ ಕಾರಣದಿಂದ ಕೆಲಸ ಬಿಟ್ಟಿದ್ದರು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಇನ್ನು ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ರಾತ್ರಿ ವೇಳೆ ಎಷ್ಟೇ ಸೆಖೆಯಿದ್ದರೂ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಕಿಟಕಿಗಳಿಗೆ ಗಟ್ಟಿಮುಟ್ಟಾದ ಗ್ರಿಲ್ ಅಳವಡಿಸಿ. ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್‌ಗಳನ್ನು ಮಲಗುವಾಗ ನಿಮ್ಮ ಪಕ್ಕದಲ್ಲಿ ಅಥವಾ ಕಿಟಕಿಯ ಹತ್ತಿರ ಇಡಬೇಡಿ. ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸುರಕ್ಷಿತ ಎಂದು ಸಲಹೆಗಳನ್ನು ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us