ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ನೇತೃತ್ವದಲ್ಲಿ ಸಮಿತಿ ರಚನೆ: ಸಿಎಂ ಬೊಮ್ಮಾಯಿ
Basavaraj Bommai: ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ನೇತೃತ್ವದಲ್ಲಿ ಸಮಿತಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಇಂದು ಸಮಿತಿ ರಚನೆ ಮಾಡಿದ್ದೇವೆ. ಪುನಶ್ಚೇತನಕ್ಕೆ ವರದಿ ಸಲ್ಲಿಸಲು ಶ್ರೀನಿವಾಸ ಮೂರ್ತಿ ಸಮಿತಿಗೆ ಕೇಳಿದ್ದೇವೆ. ಎಸ್ಕಾಂಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್ ನೇತೃತ್ವದಲ್ಲಿ ಸಮಿತಿ ಮಾಡಲು ತೀರ್ಮಾನ ಮಾಡಿದ್ದೇವೆ. ಜನರಿಗೆ ಸೇವೆ ನೀಡುವ ಸಂಸ್ಥೆಗಳನ್ನು ಬಲಪಡಿಸಲು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ವಿಧಾನಸೌಧದಲ್ಲಿ ಇಂದು (ನವೆಂಬರ್ 12) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಈ 14ನೇ ತಾರೀಖಿನಂದು ತಿರುಪತಿಯಲ್ಲಿ ಅಮಿತ್ ಶಾ ಅಧ್ಯಕ್ಷತೆಯಲ್ಲಿ ದಕ್ಷಿಣ ಭಾರತದ ಸಿಎಂಗಳ ಸಭೆ ಇದೆ. ಆ ಸಭೆಯಲ್ಲಿ ಹಲವು ಅಂತರ್ ರಾಜ್ಯ ಯೋಜನೆಗಳ ಬಗ್ಗೆ ಚರ್ಚೆ ಆಗಲಿದೆ. 17ರಂದು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಬಂಡವಾಳ ಕುರಿತಂತೆ ಸಿಎಂಗಳ ಸಭೆ ನಡೆಯಲಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ನೆರವು ನೀಡಲು ಸರ್ಕಾರಕ್ಕೆ ಸಿದ್ದರಾಮಯ್ಯ ಬರೆದಿರುವ ವಿಚಾರವಾಗಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ತಲುಪಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಾಳೆ ಅವರಿಗೆ ವಿವರ ಕೊಡುತ್ತೇವೆ ಎಂದು ಹೇಳಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಶ್ರೀಗಳ ಮನವಿ ವಿಚಾರವಾಗಿ ಮಾತನಾಡಿದ ಅವರು, ಸ್ವಾಮೀಜಿಗಳು ಕಾಯ್ದೆ ಜಾರಿಗೆ ಮನವಿಯನ್ನು ಕೊಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿನ ಕಾನೂನಿನ ಬಗ್ಗೆ ಅಧ್ಯಯನ ಮಾಡ್ತಿದ್ದೇವೆ. ಬಳಿಕ ನಮ್ಮದೇ ಆದ ಕಾನೂನನ್ನು ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಿಟ್‌ಕಾಯಿನ್ ದಂಧೆ ಪ್ರಕರಣ: ಸಿಎಂ ಸ್ಥಾನಕ್ಕೇ ಕುತ್ತು ಎಂಬುದು ರಾಜಕೀಯ ಪ್ರೇರಿತ ಹೇಳಿಕೆ ಬಿಟ್‌ಕಾಯಿನ್ ದಂಧೆ ಬಗ್ಗೆ ಆರೋಪ ಪ್ರತ್ಯಾರೋಪ ವಿಚಾರವಾಗಿ ಸಿಎಂ ಸ್ಥಾನಕ್ಕೇ ಕುತ್ತು ಎಂಬುದು ರಾಜಕೀಯ ಪ್ರೇರಿತ ಹೇಳಿಕೆ ಆಗಿದೆ. ನಾನು ಪ್ರತಿನಿತ್ಯ ಪ್ರತಿಕ್ರಿಯೆ ಕೊಡಲು ಇಚ್ಛಿಸುವುದಿಲ್ಲ. ಯಾರು ಹೇಳುತ್ತಿದ್ದಾರೋ ಅವರಿಗೆ ಹಗರಣ ಏನು, ಯಾರು ಭಾಗಿಯಾಗಿದ್ದಾರೆ ಅಂತಾ ದಯವಿಟ್ಟು ಹೇಳಿ ಎಂದು ಮನವಿ ಮಾಡುತ್ತೇನೆ. ನೀವು ಕನಿಷ್ಠ ಮಾಹಿತಿ ನೀಡಿದರೂ ತನಿಖೆಗೆ ಸಹಾಯವಾಗುತ್ತದೆ. ಕರ್ನಾಟಕ ಸರ್ಕಾರ ಬಹಳ ಸ್ಪಷ್ಟವಾಗಿದೆ. ಒಂಭತ್ತು ತಿಂಗಳ ಹಿಂದೆಯೇ ಪ್ರಕರಣ ಇಡಿಗೆ ಹಸ್ತಾಂತರ ಮಾಡಲಾಗಿದೆ. ಇಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುಮಾರು ಜನ 2 ಸಾವಿರ, 8 ಸಾವಿರ ಕೋಟಿ ಅಂತಾ ಹೇಳುತ್ತಿದ್ದಾರೆ. ಆದರೆ ಆಧಾರ ಏನಿದೆ? ಇದಕ್ಕೆ ಯಾವುದೇ ಆಧಾರ ಇಲ್ಲ. ನಮ್ಮ ಸರ್ಕಾರ ಮುಕ್ತವಾಗಿದೆ. ನಾವು ಯಾರನ್ನೂ ರಕ್ಷಣೆ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರದ ಯಾವುದೇ ವ್ಯಕ್ತಿಗಳು ಭಾಗಿಯಾಗಿಲ್ಲ. ಅವರಿಗೆ ಯಾವುದೇ ಸಣ್ಣ ಮಾಹಿತಿ ಇದ್ದರೂ ತನಿಖಾ ಏಜೆನ್ಸಿಗೆ ನೀಡಲಿ. ಈ ಏಜೆನ್ಸಿಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ. ಆರೋಪ ಮಾಡುವವರು ಮಾಹಿತಿ ನೀಡಲಿ, ಅದು ಸಾಬೀತಾಗಲಿ, ಸತ್ಯ ಹೊರಗೆ ಬರಲಿ. ವಶ ಪಡಿಸಿಕೊಂಡ ಬಿಟ್ ಕಾಯಿನ್ ಕಾಣೆಯಾಗಿದೆ ಎಂಬ ಆರೋಪ ಎಲ್ಲವೂ ಕೂಡಾ ದಾಖಲಾತಿಗಳಲ್ಲಿ ಸಾಬೀತಾಗಬೇಕಿದೆ. ನಿಜವಾದ ಸ್ಕ್ಯಾಮ್ ಏನು ಎಂಬುದು ಇಲ್ಲಿರುವ ವಿಚಾರ. ನಾವು ಸಿಬಿಐ, ಇಂಟರ್ ಪೋಲ್ಗೆ ಕೂಡಾ ರೆಫರ್ ಮಾಡಿದ್ದು ಅವರೂ ತನಿಖೆ ಮಾಡುತ್ತಿದ್ದಾರೆ. ಸಿಎಂ ಸ್ಥಾನಕ್ಕೇ ಕುತ್ತು ಎಂಬುದು ಎಲ್ಲಾ ರಾಜಕೀಯ ಪ್ರೇರಿತ ಹೇಳಿಕೆಗಳು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ಭೇಟಿಯಾದ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿದ್ದಾರೆ. ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಬಿಎಸ್‌ವೈ ಭೇಟಿ ಮಾಡಿದ್ದಾರೆ. ಬಿಎಸ್‌ವೈ ಕರೆಯ ಮೇರೆಗೆ ಕಾವೇರಿ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತುಮಕೂರಿನಿಂದ ಬಿ.ಎಸ್. ಯಡಿಯೂರಪ್ಪ ವಾಪಸಾಗುವ ಮುನ್ನವೇ ಸಿಎಂ ಭೇಟಿ ಮಾಡಿದ್ದಾರೆ. ಕಾವೇರಿ ನಿವಾಸಕ್ಕೆ ಆಗಮಿಸಿ ಕಾಯುತ್ತಿದ್ದ ಸಿಎಂ ಬೊಮ್ಮಾಯಿಯನ್ನು ಬಿಎಸ್ ಯಡಿಯೂರಪ್ಪ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ಮತಾಂತರ ಕಾಯ್ದೆ ಜಾರಿ ವಿಚಾರ ಚರ್ಚಿಸಲು ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ ಶ್ರೀಗಳ ನಿಯೋಗ
ಇದನ್ನೂ ಓದಿ: ಬಿಟ್‌ಕಾಯಿನ್ ಪ್ರಕರಣ ಮುಖ್ಯವಲ್ಲ ಎಂದ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ಚರ್ಚಿಸಿದ್ದು ಏಕೆ?- ಪ್ರಿಯಾಂಕ್ ಖರ್ಗೆ