ಬೆಂಗಳೂರು: ಮೇಕೆದಾಟು ಯೋಜನೆ ಪ್ರದೇಶ ಕರ್ನಾಟಕದಲ್ಲೇ ಬರುತ್ತದೆ. ಯೋಜನೆಯಿಂದ ಸ್ವಲ್ಪ ಪ್ರದೇಶ ಮುಳುಗಡೆಯಾಗಬಹುದು. ಮೇಕೆದಾಟಿನಿಂದ ಬೆಂಗಳೂರಿಗೆ ಕುಡಿಯುವ ನೀರು ಸಿಗಲಿದೆ. ಮೇಕೆದಾಟಿನಿಂದ ಟ್ರಿಬ್ಯುನಲ್ ಆದೇಶ ಉಲ್ಲಂಘನೆಯಾಗಲ್ಲ. ಕಳೆದ ಹಲವು ವರ್ಷದಿಂದ ತಮಿಳುನಾಡಿಗೆ ನೀರು ಹಂಚಿಕೆ ಆಗುತ್ತಿದೆ. ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗ್ತಿದೆ. ತಮಿಳುನಾಡು ಹೆಚ್ಚುವರಿ ನೀರನ್ನೂ ಬಳಸಿಕೊಳ್ಳುತ್ತಿದೆ. ತಮಿಳುನಾಡು ಸರ್ಕಾರದ ವಾದವನ್ನು ವಿರೋಧಿಸಿದ್ದೇವೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ಪದೇಪದೆ ಅಡ್ಡಿಪಡಿಸುತ್ತಿದೆ. ನಮ್ಮ ನೀರಿನ ಹಕ್ಕು ಪಡೆಯಲು ನಾವು ಸಿದ್ಧ. ಮೇಕೆದಾಟು ಯೋಜನಾ ವರದಿ ಕ್ಲಿಯರ್ ಆಗಬೇಕು. ತಮಿಳುನಾಡಿನ ನಿರ್ಣಯ ಒಕ್ಕೂಟ ವ್ಯವಸ್ಥೆಗೆ ಧಕ್ಕೆ. ನಾಳೆಯೇ ನಾವು ನಿರ್ಣಯ ತರುತ್ತೇವೆ. ಇಂದು ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಸಚಿವ ಗೋವಿಂದ ಕಾರಜೋಳರಿಗೆ ಅನಾರೋಗ್ಯ ಹಿನ್ನೆಲೆ, ಕಾರಜೋಳ ಚೆನ್ನಾಗಿದ್ದಿದ್ದರೆ ದೆಹಲಿಗೆ ಹೋಗುತ್ತಿದ್ದರು. ಅಸೆಂಬ್ಲಿ ಮುಗಿಯುತ್ತಲೇ ದೆಹಲಿಗೆ ಹೋಗುತ್ತೇನೆ. ಇನ್ನೊಂದು ರಾಜ್ಯದ ಅನುಮತಿ ಕೇಳೋದು ಸರಿಯಲ್ಲ. ತೆಲುಗು ಗಂಗಾ ಯೋಜನೆಗೆ 15 ಟಿಎಂಸಿ ನೀರು ಕೊಟ್ಟೆವು ಎಂದೂ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಹೋಗೋಣ. ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ: ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ. ತಮಿಳುನಾಡು ಸರ್ಕಾರದಿಂದ ಮೇಕೆದಾಟಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಯೋಜನೆಗೆ ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. ಕಾನೂನು ಬಾಹಿರ ನಿರ್ಣಯಕ್ಕೆ ಕಾನೂನಾತ್ಮಕ ಹಕ್ಕಿಲ್ಲ. ತಮಿಳುನಾಡು ರಾಜಕೀಯ ಕ್ಯಾತೆ ತೆಗೆಯಲು ನಿರ್ಣಯ ಮಾಡುತ್ತಿದೆ. 2018ರಲ್ಲಿ ಸುಪ್ರೀಂನಿಂದ ಅಂತಿಮ ತೀರ್ಪು ಬಂದಿದೆ. ಸುಪ್ರೀಂ ತೀರ್ಪನ್ನ ನಾವು, ಅವರೂ ಕೂಡ ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ 177.25 ಟಿಎಂಸಿ ನೀರನ್ನು ಅವರಿಗೆ ಕೊಡಬೇಕು. ಹೆಚ್ಚುವರಿಯಾಗಿ 7-8 ವರ್ಷಗಳಲ್ಲಿ 582 TMC ನೀರು ನೀಡಲಾಗಿದೆ. ಕಾಲು ಕೆರೆದುಕೊಂಡು ಬಂದ್ರೆ ಕನ್ನಡಿಗರು ಸಹಿಸಿಕೊಳ್ಳಬೇಕಾ? ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಹೋಗೋಣ. ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ ಎಂದು ಮೇಕೆದಾಟು ಯೋಜನೆ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.
ನಾವು ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಟ್ಟಿಗೆ ಇದ್ದೇವೆ: ಬಿಎಸ್ ಯಡಿಯೂರಪ್ಪ
ಮೇಕೆದಾಟು ಬಗ್ಗೆ ಸದನದಲ್ಲಿ ಅನೇಕ ಬಾರಿ ಚರ್ಚೆಯಾಗಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಾವು ತಮಿಳುನಾಡಿನ ಮುಲಾಜಿನಲ್ಲಿ ಇಲ್ಲ. ನಾವು ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಟ್ಟಿಗೆ ಇದ್ದೇವೆ. ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವು ಸ್ಪಷ್ಟ ಮಾಡಲಾಗಿದೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಆಗಿದೆ. ತಮಿಳುನಾಡು ನಿರ್ಣಯದಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕ್ತಿದೆ. ಕೇಂದ್ರ, ಪರಿಸರ ಇಲಾಖೆ ಯೋಜನೆಗೆ ಅನುಮತಿ ಕೊಡಲಿ. ಸಿಎಂಗೆ ಸಾಧ್ಯವಾದರೆ ಪ್ರಧಾನಿಯನ್ನು ಭೇಟಿ ಮಾಡಲಿ. ಮುಖ್ಯಮಂತ್ರಿ ಕೇಂದ್ರದ ಸಚಿವರ ಜತೆಗೂ ಚರ್ಚೆ ನಡೆಸಲಿ. ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿಗೆ ಒತ್ತಾಯಿಸಲಿ ಎಂದು ಹೇಳಿದ್ದಾರೆ.
ಸಿಎಂ ಪರಿಸರ ಇಲಾಖೆಯ ಅನುಮತಿ ಪಡೆದು ಬರಬೇಕು. ತಮಿಳುನಾಡಿನ ನಿರ್ಣಯವನ್ನ ಕೇಂದ್ರ ಒಪ್ಪುವ ಅಗತ್ಯವಿಲ್ಲ. ತಮಿಳುನಾಡು ನಿರ್ಣಯಕ್ಕೆ ನಾವು ಅಂಜುವ ಪ್ರಶ್ನೆಯಿಲ್ಲ. ತಮಿಳುನಾಡು ನಿರ್ಣಯವನ್ನು ತೀವ್ರವಾಗಿ ಖಂಡಿಸ್ತೇನೆ. ಸಿಎಂ ತಕ್ಷಣ ದೆಹಲಿಗೆ ಹೋಗಲಿ, ಸಚಿವರ ಭೇಟಿ ಮಾಡಲಿ. ಆದಷ್ಟು ಬೇಗ ಪರಿಸರ ಇಲಾಖೆಯ ಅನುಮತಿ ಪಡೆಯಲಿ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ: ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ. ಯೋಜನೆಗೆ ಬೇಕಿರೋದು ಪರಿಸರ ಇಲಾಖೆಯ ಒಪ್ಪಿಗೆ. ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಸಲಹೆ ಸರಿ ಇದೆ. ತಮಿಳುನಾಡಿನ ಸರ್ಕಾರದ ನಿರ್ಣಯ ಹೊಸದೇನಲ್ಲ. 1924ರಿಂದಲೂ ತಮಿಳುನಾಡು ಗದಾಪ್ರಹಾರ ಮಾಡುತ್ತಿದೆ. ರಾಜ್ಯ ಸರ್ಕಾರ ಕಾಲಹರಣ ಮಾಡದೆ ಮನವರಿಕೆ ಮಾಡ್ಬೇಕು. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡ್ಬೇಕು. ಕೇಂದ್ರದ ಮನವೊಲಿಸಿ ಯಶಸ್ವಿಯಾದ್ರೆ ಯೋಜನೆ ಜಾರಿ ಮಾಡಬೇಕು. ತಕ್ಷಣ ಕೇಂದ್ರದ ಮನವೊಲಿಸುವ ಕೆಲಸ ಮಾಡಬೇಕು ಎಂದು ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳ; ಅವರ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ: ಸಿಎಂ ಬೊಮ್ಮಾಯಿ
ಇದನ್ನೂ ಓದಿ: ಮೇಕೆದಾಟು ಯೋಜನೆ: ತಮಿಳುನಾಡು ವಿರೋಧಕ್ಕೆ ಡೋಂಟ್ ಕೇರ್, ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ