2011ರ ಜನಸಂಖ್ಯೆ ಆಧಾರದ ಮೇಲೆ ಬಿಬಿಎಂಪಿ ವಾರ್ಡ್ ಮರುವಿಂಗಡನೆ: ಆಯುಕ್ತ ತುಷಾರ್ ಗಿರಿನಾಥ್
2011ರ ಜನಸಂಖ್ಯೆ ಆಧಾರದ ಮೇಲೆ ಎಲ್ಲ 243 ವಾರ್ಡ್ಗಳಿಗೂ ಮತದಾರರನ್ನು ವಿಂಗಡನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ (BBMP Ward Delimitation) ಪುನರ್ ವಿಂಗಡನೆ ಕರಡು ಪ್ರಕಟವಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಲಾಗಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಎಲ್ಲ 243 ವಾರ್ಡ್ಗಳಿಗೂ ಮತದಾರರನ್ನು ವಿಂಗಡನೆ ಮಾಡಲಾಗಿದೆ. ಕೆಲ ವಾರ್ಡ್ಗಳ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಕೆಲ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಾಗಿದ್ದರೆ, ಹಲವೆಡೆ ಕಡಿಮೆಯಾಗಿದೆ. ನಗರದ ಹೊರವಲಯದ ಕ್ಷೇತ್ರಗಳಲ್ಲಿ ಹೆಚ್ಚು ವಾರ್ಡ್ಗಳು ಸೇರ್ಪಡೆಯಾಗಿವೆ. ಎಲ್ಲ ವಾರ್ಡ್ಗಳ ನಕಾಶೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ. ಎಲ್ಲ ವಾರ್ಡ್ಗಳಿಗೂ ಸಾರ್ವಜನಿಕರ ಭಾವನೆ ಆಧರಿಸಿ ನಾಮಕರಣ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿದರು.
ರಸ್ತೆಗಳಿಗೆ ಗುಂಡಿ ಬಿದ್ದಿರುವ ಕುರಿತು ಕೆಲವರು ಟ್ವೀಟ್ ಮಾಡಿದ್ದಾರೆ. ಈಗ ಗುಂಡಿಗಳು ಬಿದ್ದಿರುವ ಜಾಗದಲ್ಲಿ ಮೊದಲಿನಿಂದಲೂ ಗುಂಡಿಗಳಿದ್ದವು. ಮೋದಿ ಬರುತ್ತಿರುವ ಕಾರಣ ಅವನ್ನು ರಿಪೇರಿ ಮಾಡಲಾಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ತನಿಖೆಯ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ, ಪ್ರಧಾನಿ ಕಾರ್ಯಾಲಯಕ್ಕೆ ಕಳಿಸಲಾಗುವುದು. ಅಧಿಕಾರಿಗಳು ನಿನ್ನೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದರು. ಡಾಂಬರು ಕಿತ್ತು ಬರುತ್ತಿರುವುದನ್ನು ಗಮನಿಸಿದ್ದಾರೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರವು ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು 2001-2011ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳವು ಶೇ. 44ಕ್ಕಿಂತಲೂ ಮೀರಿ ದಾಖಲೆಯಾಗಿದೆ. 2011ರ ಜನಗಣತಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತೆಂದು ನಿಗದಿತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡುಗಳ ಜನಸಂಖ್ಯೆಯಲ್ಲಿ ಅಸಮಾನತೆ ಸೃಷ್ಟಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಬಿಬಿಎಂಪಿಯ ವಾರ್ಡುಗಳನ್ನು 198 ರಿಂದ 243ಕ್ಕೆ ಹೆಚ್ಚಿಸಿದೆ.
ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡುಗಳ ಸೀಮಾರೇಖೆಯನ್ನು ಗುರುತಿಸುವ (delimiting the ward boundary) ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 (KARNATAKA ACT NO. 53 OF 2020 THE BRUHAT BENGALURU MAHANAGARA PALIKE ACT, 2020 FT PAR: G.O. No UDD 4 MLR 2014 dt.215.02.2014) ರಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡುಗಳ ವಿಂಗಡಣೆ ಮಾಡಿ ಪ್ರತೀ ವಾರ್ಡಿನ ಗಡಿಗಳನ್ನು ಗುರುತಿಸಿದೆ.
Published On - 12:43 pm, Fri, 24 June 22