ಕಳಪೆ ರಸ್ತೆ ಬಗ್ಗೆ ಪ್ರಧಾನಿ ಕಚೇರಿಗೆ ತಪ್ಪು ಮಾಹಿತಿ ಕೊಟ್ಟ ಬಿಬಿಎಂಪಿ: ಗುತ್ತಿಗೆದಾರನ ರಕ್ಷಣೆಗೆ ಯತ್ನಿಸುತ್ತಿರುವ ಆರೋಪ
ಕಳಪೆ ರಸ್ತೆ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಬಿಬಿಎಂಪಿ ಮುಂದಾಗಿದ್ದು, ಗುತ್ತಿಗೆದಾರನಿಗೆ ದಂಡ ಹಾಕುವ ಪ್ರಸ್ತಾವ ಕೈಬಿಟ್ಟಿದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕರ್ನಾಟಕ ಭೇಟಿ ವೇಳೆ ಕಳಪೆ ರಸ್ತೆ ನಿರ್ಮಿಸಿದ್ದ ಗುತ್ತಿಗೆದಾರರನ್ನು ರಕ್ಷಿಸಿಕೊಳ್ಳಲು ಬಿಬಿಎಂಪಿ ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಳಪೆ ರಸ್ತೆ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಬಿಬಿಎಂಪಿ ಮುಂದಾಗಿದ್ದು, ಗುತ್ತಿಗೆದಾರನಿಗೆ ದಂಡ ಹಾಕುವ ಪ್ರಸ್ತಾವ ಕೈಬಿಟ್ಟಿದೆ ಎಂದು ಮೂಲಗಳು ಹೇಳಿವೆ. ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳಲು ಬಿಡಬ್ಲ್ಯೂಎಸ್ಎಸ್ಬಿಯ ಪೈಪ್ಗಳು ಸೋರಿಕೆಯಾಗಿದ್ದು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮರಿಯಪ್ಪನಪಾಳ್ಯದಲ್ಲಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ದಂಡ ಹಾಕದಿರಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರನಿಗೆ ದಂಡ ಹಾಕಿದರೆ ಕಳಪೆ ಕಾಮಗಾರಿ ಎಂದು ಒಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ದಂಡ ಹಾಕಬೇಡಿ ಎಂದು ಸ್ಥಳೀಯ ಅಧಿಕಾರಿಗಳು ಉನ್ನತ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ರಸ್ತೆ ಕಾಮಗಾರಿಯು ಉತ್ತಮ ಗುಣಮಟ್ಟದ್ದು ಎಂದೇ ಹೇಳಲಾಗಿದೆ.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಬಿಬಿಂಎಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ಈ ಸಂಬಂಧ ಈಗಾಗಲೇ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವರದಿ ಕಳಿಸಿದ್ದೇವೆ. ಯಾವ ರಸ್ತೆ ಹಾಳಾಗಿದೆ ಅಂತ ಟ್ವೀಟ್ ಮಾಡಲಾಗಿತ್ತೋ ಆ ರಸ್ತೆ ಬಗ್ಗೆ ವರದಿ ಕಳಿಸಿದ್ದೇವೆ. ಈ ರಸ್ತೆಯಲ್ಲಿ ಪ್ರಧಾನಮಂತ್ರಿ ಓಡಾಡಿಲ್ಲ. 2021ರಲ್ಲಿ ನವೆಂಬರ್ನಲ್ಲಿ ಆ ರಸ್ತೆ ನಿರ್ಮಿಸಲಾಗಿತ್ತು. ನಂತರ ಅಲ್ಲಿ ಒಳಚರಂಡಿ ಮಾರ್ಗ (ಸೀವೇಜ್), ಹಳೇ ಕಾಲದ ವಾಟರ್ ಪೈಪ್ ಪತ್ತೆಯಾಗಿತ್ತು. ಪ್ರಧಾನಿಗಳ ಭೇಟಿ ವೇಳೆ ಈ ರಸ್ತೆಯಲ್ಲಿ ಕಾಮಗಾರಿ ನಡೆಸಿಲ್ಲ. ಪ್ರಧಾನಿಗಳು ಓಡಾಡಿದ ಪಕ್ಕದ ರಸ್ತೆಯಲ್ಲಿ ನೀರು ಜಿನುಗುತ್ತದೆ ಎನ್ನುವ ಕಾರಣಕ್ಕೆ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಎಂದು ಹೇಳಿದರು.
ವರದಿ ನೀಡುವಂತೆ ಬಿಬಿಎಂಪಿಗೆ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಗಳು ಹಾಳಾಗಿದ್ದವು. ಕಳಪೆ ಕಾಮಗಾರಿಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿತ್ತು. ಪ್ರಧಾನಿ ಕಚೇರಿ ಕೇಳಿದ್ದ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿತ್ತು.
ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆ, ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ ಎರಡೂ ರಸ್ತೆಗಳು ಹಾಳಾಗಿದ್ದವು. ಈ ಕುರಿತು ಈ ಮೊದಲು ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತರು, ಮಳೆ ಬಂದ ಕಾರಣ ಹೀಗಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿದ್ದರು.
Published On - 12:36 pm, Mon, 27 June 22