ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರವಾಹ ಮುನ್ನೆಚ್ಚರಿಕೆ ನೀಡಲಿದೆ ಸೆನ್ಸರ್: ತಂತ್ರಜ್ಞಾನದ ಮೊರೆಹೋದ ಬಿಬಿಎಂಪಿ
ಪ್ರವಾಹವನ್ನು ಎದುರಿಸುವ ನಿಟ್ಟಿನಲ್ಲಿ ಬಿಬಿಎಂಪಿ ತಂತ್ರಜ್ಞಾನದ ಮೊರೆ ಹೋಗಿದ್ದು, ಚರಂಡಿಗಳಲ್ಲಿ ಸೆನ್ಸರ್ಗಳನ್ನು ಅಳವಡಿಸುತ್ತಿದೆ. ಇವುಗಳಿಂದ ನೀರಿನ ಮಟ್ಟದ ಮಾಹಿತಿ ಕೆಎಸ್‌ಎನ್‌ಡಿಎಂಸಿಯಿಂದ ಬಿಬಿಎಂಪಿಯ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತದೆ. ಇದು ಇಂಡಿಕೇಟರ್ನಲ್ಲಿ ನೀಡುವ ಬಣ್ಣದ ಸಂಕೇತಗಳ ಮೂಲಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಮೇ 11: ಮುಂಗಾರು ಮಳೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ಪ್ರವಾಹವನ್ನು ಎದುರಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಂತ್ರಜ್ಞಾನದ (Technology) ಮೊರೆ ಹೋಗಿದೆ. ಈ ವರ್ಷ, ರಿಯಲ್ ಟೈಂ ನೀರಿನ ಮಟ್ಟವನ್ನು ಗಮನಿಸಲು ರಾಜಕಾಲುವೆಗಳಲ್ಲಿ 124 ಕಡೆ ವಾಟರ್ ಲೆವೆಲ್ ಸೆನ್ಸರ್ಗಳನ್ನು (Water Level Sensors) ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಸ್ಥಾಪಿಸಿರುವ ಈ ಸೆನ್ಸರ್ಗಳು ಚರಂಡಿಗಳಲ್ಲಿನ ನೀರಿನ ಮಟ್ಟದ ರಿಯಲ್ ಟೈಂ ಮಾಹಿತಿ ಒದಗಿಸುತ್ತವೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಕಚೇರಿಗೇ ಬರುತ್ತೆ ಅಲರ್ಟ್?
ನೀರಿನ ಮಟ್ಟದ ಮಾಹಿತಿ ಕೆಎಸ್‌ಎನ್‌ಡಿಎಂಸಿಯಿಂದ ಬಿಬಿಎಂಪಿಯ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತದೆ. ಇದು ಇಂಡಿಕೇಟರ್ನಲ್ಲಿ ನೀಡುವ ಬಣ್ಣದ ಸಂಕೇತಗಳ ಮೂಲಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಹಸಿರು ಮತ್ತು ನೀಲಿ ಮಟ್ಟದ ಇಂಡಿಕೇಟರ್ಗಳು ನೀರಿನ ಮಟ್ಟವು ಸುರಕ್ಷಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಕೆಂಪು ಇಂಡಿಕೇಟರ್ ಕಂಡುಬಂದರೆ ಅಪಾಯ ಎಂದರ್ಥ. ಇದು ಕಪ್ಪು ಇಂಡಿಕೇಟರ್ಗೆ ತಲುಪಿದರೆ, ನಗರವು ಪ್ರವಾಹವನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ.
ಸೆನ್ಸರ್ಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ರಾಜಕಾಲುವೆಗಳು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆಬದಿಯಲ್ಲಿರುವ ಅವಶೇಷಗಳನ್ನು ತೆರವುಗೊಳಿಸಿದ್ದೇವೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಕಾಂಕ್ರೀಟ್ ತಡೆಗೋಡೆಗಳ ನಿರ್ಮಾಣಕ್ಕೆ ವೇಗ
ಬಿಬಿಎಂಪಿಯು ಒಟ್ಟು 860 ಕಿಲೋಮೀಟರ್‌ಗಳ ರಾಜಕಾಲುವೆ ವ್ಯಾಪ್ತಿಯ 581 ಕಿಲೋಮೀಟರ್‌ಗಳಲ್ಲಿ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಾಣ ಮಾಡಿದೆ. 199 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ತಡೆಗೋಡೆಗಳ ನಿರ್ಮಾಣ ಪ್ರಗತಿಯಲ್ಲಿದೆ.
ನಗರದ 74 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಲು ಕ್ರಮ ಕೈಗೊಂಡಿರುವುದಾಗಿ ಬಿಬಿಎಂಪಿ ಹೇಳಿದೆ.
ಇದನ್ನೂ ಓದಿ: ಬೆಂಗಳೂರು: ಮಳೆಗೆ ಹಲವು ಕಡೆ ಧರೆಗೆ ಉರುಳಿದ ನೂರಾರು ಮರಗಳು, ಕೂದಲೆಳೆ ಅಂತರದಲ್ಲಿ ಬಜಾವ್ ಆದ ಕುಟುಂಬ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ವರ್ಷ ದೇಶಾದ್ಯಂತ ಶೇ 104 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿಯೂ ಹೆಚ್ಚಿನ ಮಳೆಯಾಗಲಿದೆ. ಹೀಗಾಗಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಇತ್ತೀಚೆಗೆ ಪತ್ರ ಬರೆದಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:47 pm, Sat, 11 May 24




