ಇನ್ನೂ ಆಸ್ತಿ ತೆರಿಗೆ ಪಾವತಿಸಿಲ್ಲವೇ? ಕಾದಿದೆ ಸಂಕಷ್ಟ: ವಸೂಲಿಗೆ ಮುಂದಿನ ಕ್ರಮಕ್ಕೆ ಮುಂದಾದ ಬಿಬಿಎಂಪಿ
ಬೆಂಗಳೂರು ನಗರದಾದ್ಯಂತ ಆಸ್ತಿ ಮಾಲೀಕರು ಸುಮಾರು 786.86 ಕೋಟಿ ರೂ. ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು, ಇದೀಗ ಬಿಬಿಎಂಪಿ ಕಠಿಣ ಕ್ರಮದ ಎಚ್ಚರಿಕೆ ನೀಡಿ ನೋಟಿಸ್ ಕಳುಹಿಸಿದೆ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ತುರ್ತು ಮಾರಾಟ ಮಾಡುವಂಥ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು, ಆನ್ಲೈನ್ ಮೂಲಕ ಕೂಡಲೇ ತೆರಿಗೆ ಪಾವತಿಸುವಂತೆ ಸೂಚಿಸಿದೆ.

ಬೆಂಗಳೂರು, ಸೆಪ್ಟೆಂಬರ್ 2: ಆಸ್ತಿ ತೆರಿಗೆ ಪಾವತಿ ಮಾಡದೇ ಇರುವ ಸುಸ್ತಿದಾರರಿಗೆ ಬಿಬಿಎಂಪಿ (BBMP) ನೋಟಿಸ್ ನೀಡಿದ್ದು, ಕೂಡಲೇ ಪಾವತಿ ಮಾಡುವಂತೆ ಸೂಚಿಸಿದೆ. ಇಲ್ಲವಾದಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ ಮತ್ತು ಸ್ಥಿರ ಆಸ್ತಿಗಳ ತುರ್ತು ಮಾರಾಟ ಮಾಡುವುದು ಸೇರಿದಂತೆ ವಸೂಲಿ ಮಾಡಲು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ (Bengaluru) 2.75 ಲಕ್ಷ ಆಸ್ತಿ ಮಾಲೀಕರು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. ತೆರಿಗೆ ಪಾವತಿ ಮಾಡದವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿಸುವುದನ್ನು ಬಾಕಿ ಇರಿಸಿಕೊಂಡವರು BBMPtax.karnataka.gov.in ವೆಬ್ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸುವಂತೆ ಬಿಬಿಎಂಪಿ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಯಾವ ಏರಿಯಾಗಳಲ್ಲಿ ಎಷ್ಟೆಷ್ಟು ತೆರಿಗೆ ಬಾಕಿ?
ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಏರಿಯಾಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿರುವ ಆಸ್ತಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮಹದೇವಪುರ ವಲಯದಲ್ಲೇ ಅತ್ಯಧಿಕ ಆಸ್ತಿಗಳು ತೆರಿಗೆ ಕಟ್ಟದೆ ಬಾಕಿ ಉಳಿಸಿವೆ. ಈ ವಲಯದಲ್ಲಿ 65,040 ಸುಸ್ತಿದಾರರು ಇದ್ದು, 197.90 ಕೋಟಿ ರೂ. ತೆರಿಗೆ ಪಾವತಿಗೆ ಬಾಕಿ ಇದೆ. ದಕ್ಷಿಣ ವಲಯದಲ್ಲೂ ದೊಡ್ಡ ಪ್ರಮಾಣದ ತೆರಿಗೆ ಬಾಕಿ ಇದ್ದು, 25,162 ಸುಸ್ತಿದಾರರಿದ್ದಾರೆ. 116.81 ಕೋಟಿ ರೂ. ತೆರಿಗೆ ಬಾಕಿ ಇದೆ.
ಪೂರ್ವ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿಯೂ ಸಹ ಗಣನೀಯ ಸಂಖ್ಯೆಯ ಆಸ್ತಿ ಮಾಲೀಕರು ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಇದೇ ರೀತಿ ಯಲಹಂಕ ಮತ್ತು ಪಶ್ಚಿಮ ವಲಯಗಳಲ್ಲಿ ಕೂಡ ತೆರಿಗೆ ಬಾಕಿದಾರರ ಸಂಖ್ಯೆ ಹೆಚ್ಚಾಗಿದೆ. ರಾಜರಾಜೇಶ್ವರಿ ನಗರ ಮತ್ತು ದಸರಹಳ್ಳಿ ವಲಯಗಳಲ್ಲಿಯೂ ಸಹ ಸಾಕಷ್ಟು ಆಸ್ತಿಗಳು ತೆರಿಗೆ ಕಟ್ಟದೆ ಬಿಬಿಎಂಪಿಗೆ ಭಾರೀ ನಷ್ಟ ಉಂಟುಮಾಡಿವೆ.
ಇದನ್ನೂ ಓದಿ: ಇಂದಿನಿಂದ ಗ್ರೇಟರ್ ಬೆಂಗಳೂರು ಅಥಾರಿಟಿ: ದಶಕಗಳ ಇತಿಹಾಸ ಹೊಂದಿದ್ದ ಬಿಬಿಎಂಪಿ ಇನ್ಮುಂದೆ ನೆನಪು
ಒಟ್ಟಾರೆಯಾಗಿ, ಬೆಂಗಳೂರು ನಗರದ ಎಲ್ಲಾ ವಲಯಗಳನ್ನು ಸೇರಿಸಿದಾಗ 786.86 ಕೋಟಿ ರೂ. ತೆರಿಗೆ ಕಟ್ಟದೆ ಬಿಬಿಎಂಪಿಗೆ ಭಾರಿ ನಷ್ಟವಾಗಿದೆ.







