Yellow Line Metro: ಮುಂದಿನ ವಾರದಿಂದ ಟ್ರ್ಯಾಕಿಗಿಳಿಯಲಿದೆ ನಮ್ಮ ಮೆಟ್ರೋ ಯೆಲ್ಲೋ ಲೈನ್ ನಾಲ್ಕನೇ ರೈಲು
ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಸಂಚಾರ ಮಾಡುತ್ತಿದ್ದು, ಪ್ರಯಾಣಿಕರು 25 ನಿಮಿಷ ಕಾಯಬೇಕಿದೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಶುಭ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ನಾಲ್ಕನೇ ರೈಲು ಸೆಪ್ಟೆಂಬರ್ ಎರಡನೇ ವಾರದಲ್ಲಿ ಟ್ರ್ಯಾಕಿಗಿಳಿಯಲಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 2: ಆರ್.ವಿ ರೋಡ್ನಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ಗೆ (Namma Metro Yellow Line) ಆಗಸ್ಟ್ 10 ರಂದು ಚಾಲನೆ ದೊರೆತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಲೇ ಮೆಟ್ರೋ ಮಾರ್ಗ ಲೋಕಾರ್ಪಣೆಯಾಗಿದೆ. ಆದರೆ, ಈ ಮಾರ್ಗದಲ್ಲಿ ಸಂಚಾರ ಮಾಡಲು ನಮ್ಮ ಮೆಟ್ರೋ ಬಳಿ ಕೇವಲ ಮೂರು ರೈಲುಗಳಿದ್ದು, ಇದರಿಂದ 25 ನಿಮಿಷಕ್ಕೊಂದ ರಂತೆ ರೈಲು ಸಂಚಾರ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಈಗಾಗಲೇ ಕಲ್ಕತ್ತಾದಿಂದ ನಾಲ್ಕನೇ ರೈಲಿನ ಸೆಟ್ ಬಿಎಂಆರ್ಸಿಎಲ್ (BMRCL) ಡಿಪೋಗೆ ಬಂದಿದ್ದು, ನಾಲ್ಕನೇ ರೈಲಿನ ಟ್ರಯಲ್ ರನ್ ಕೂಡ ಯಶ್ವಸಿಯಾಗಿದೆ. ಅಕ್ಟೋಬರ್ನಲ್ಲಿ ಕೋಲ್ಕತ್ತಾದಿಂದ ನಮ್ಮ ಮೆಟ್ರೋಗೆ ಐದನೇ ರೈಲು ಕೂಡ ಆಗಮಿಸಲಿದೆ ಎನ್ನಲಾಗಿದೆ. ನಂತರ ಪ್ರತಿ ತಿಂಗಳು ಒಂದು ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋ ಗೆ ಸೇರ್ಪಡೆಯಾಗಲಿವೆ. ಹೊಸ ರೈಲಿನ ಆಗಮನದಿಂದ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ.
ಆಗಸ್ಟ್ 11 ರಿಂದ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲೂ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿ ದಿನ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಯೆಲ್ಲೋ ಲೈನ್ನಲ್ಲಿ ಕೇವಲ ಮೂರು ರೈಲುಗಳಿರುವ ಕಾರಣದಿಂದಾಗಿ, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. 2026ರ ಮಾರ್ಚ್ ವೇಳೆಗೆ ಯೆಲ್ಲೋ ಲೈನ್ಗೆ ಎಲ್ಲಾ ರೈಲುಗಳು ಆಗಮಿಸಲಿದ್ದು, ಗ್ರೀನ್ ಮತ್ತು ಪರ್ಪಲ್ ಲೈನ್ ರೀತಿಯಲ್ಲಿ ಐದು ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿವೆ.
25 ನಿಮಿಷಕ್ಕೊಂದರಂತೆ ರೈಲು ಸಂಚಾರ ಮಾಡುತ್ತಿರುವುದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಹೊಸ ರೈಲು ಆಗಮನದಿಂದ ತುಂಬಾ ಸಹಾಯ ಆಗಲಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್ಸಿಎಲ್ ಬಿಗ್ ಅಪ್ಡೇಟ್
ಒಟ್ಟಿನಲ್ಲಿ, ಯೆಲ್ಲೋ ಲೈನ್ ಮೆಟ್ರೋ ರೈಲು ಸಾವಿರಾರು ಐಟಿಬಿಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಹಾದುಹೋಗುತ್ತಿದ್ದು, ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ಸದ್ಯ ಮೂರು ರೈಲು ಅಷ್ಟೇ ಸಂಚರಿಸುತ್ತಿರುವುದರಿಂದ ಜನಜಂಗುಳಿ ಹೆಚ್ಚಾಗಿ ನಿಲ್ಲಲ್ಲೂ ಆಗದೆ, ಕೂರಲು ಆಗದೆ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಹೊಸ ರೈಲು ಸಂಚಾರದಿಂದ ದೊಡ್ಡ ಮಟ್ಟದಲ್ಲಿ ಸಹಾಯವಾಗುವುದರಲ್ಲಿ ಅನುಮಾನವಿಲ್ಲ.







